
ಮೂರ್ನಾಡು ಸೆ.8 NEWS DESK : ಸಹಕಾರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ 102ನೇ ವರ್ಷದ ಕೈಲ್ ಮುಹೂರ್ತ ಹಬ್ಬದ ಆಟೋಟಗಳ ಕಾರ್ಯಕ್ರಮವು ಸಂಭ್ರಮದಿಂದ ಹಾಗೂ ಅತ್ಯಂತ ಯಶಸ್ವಿಯಾಗಿ ನಡೆಯಿತು. ಮೂರ್ನಾಡು ವಿದ್ಯಾಸಂಸ್ಥೆಯ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ವಿವಿಧ ಆಟೋಟಗಳ ಕಾರ್ಯಕ್ರಮಕ್ಕೆ ಕೋಡಂಬೂರು ಗ್ರಾಮದ ಕಾಫಿ ಬೆಳೆಗಾರ ಬಡುವಂಡ ಬಿ. ಮುತ್ತಪ್ಪ ಅವರು ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಪುರುಷರು, ಮಹಿಳೆಯರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಹಲವರು ವಿವಿಧ ಓಟದ ಸ್ಪರ್ಧೆಗಳು, ಭಾರದ ಕಲ್ಲು ಎಸೆತ, ನಿಂಬೆಹಣ್ಣು-ಚಮಚ ಓಟ, ವಯಸ್ಕರ ಓಟ, ಕಾಲುಕಟ್ಟಿ ಓಟ ಹಾಗೂ ವಾದ್ಯದ ಕುಣಿತ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ವಿಜೇತರಿಗೆ ಮುಖ್ಯ ಅತಿಥಿಗಳು ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು. ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿಗೆ ಒಳಪಟ್ಟ ಆರು ಗ್ರಾಮಗಳ ಪುರುಷರು ಹಾಗೂ ಮಹಿಳೆಯರ ತಂಡಗಳ ನಡುವೆ ಹಗ್ಗಜಗ್ಗಾಟ ಸ್ಪರ್ಧೆ ನಡೆಯಿತು. ಪುರುಷರ ವಿಭಾಗದಲ್ಲಿ ಕಿಗ್ಗಾಲು ಗ್ರಾಮದ ತಂಡವನ್ನು ಸೋಲಿಸಿದ ಬಾಡಗ ಗ್ರಾಮದ ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು. ಮಹಿಳೆಯರ ವಿಭಾಗದಲ್ಲಿ ಮುತ್ತಾರುಮುಡಿ ಗ್ರಾಮದ ತಂಡವನ್ನು ಮಣಿಸಿದ ಕಿಗ್ಗಾಲು ಗ್ರಾಮದ ತಂಡ ಪ್ರಥಮ ಸ್ಥಾನ ಗಳಿಸಿತು. ಸಾರ್ವಜನಿಕರಿಗಾಗಿ ಆಯೋಜಿಸಿದ್ದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಅವರೆಮಾದಂಡ ಸುಗುಣ ಸುಬ್ಬಯ್ಯ ಪ್ರಥಮ, ತೇಲಪಂಡ ಸುಬ್ಬಯ್ಯ ದ್ವಿತೀಯ ಹಾಗೂ ತಿರುಟೇರ ದಿಲನ್ ದೇವಯ್ಯ ತೃತೀಯ ಸ್ಥಾನ ಪಡೆದುಕೊಂಡರು. ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಖ್ಯಾತ ಅರಿವಳಿಕೆ ತಜ್ಞ ಡಾ. ದಂಬೆಕೋಡ ಎಸ್. ಅಯ್ಯಪ್ಪ ಮಾತನಾಡಿ, ಕ್ರೀಡೆ ಕೇವಲ ಸ್ಪರ್ಧೆಯಲ್ಲ. ಪಠ್ಯಪುಸ್ತಕಗಳಿಂದ ಜೀವನವನ್ನು ಸಂಪೂರ್ಣವಾಗಿ ಅರಿತುಕೊಳ್ಳಲು ಸಾಧ್ಯವಿಲ್ಲ. ಅನುಭವದೊಂದಿಗೆ ಬೆರೆಯುವ ಜೀವನವೇ ಪ್ರಬುದ್ಧವಾಗುತ್ತದೆ. ಇಂತಹ ಜೀವನಾನುಭವವನ್ನು ಕ್ರೀಡೆ ಕಲಿಸಿಕೊಡುತ್ತದೆ ಎಂದು ಹೇಳಿದರು. ಯುವಜನರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಹಕಾರ ಸ್ಪೋರ್ಟ್ಸ್ ಕ್ಲಬ್ ಇಂತಹ ಕ್ರೀಡಾಕೂಟಗಳನ್ನು ಆಯೋಜಿಸುತ್ತಿರುವುದು ಅವರ ಕ್ರೀಡಾಪ್ರೇಮವನ್ನು ಅಭಿವ್ಯಕ್ತಿಸುತ್ತದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಮತ್ತೋರ್ವ ಮುಖ್ಯ ಅತಿಥಿ ಖ್ಯಾತ ಮಕ್ಕಳ ತಜ್ಞ ಡಾ. ಕೆಂಬಂಡ ತಂಡ ಗೌರವ್ ಅಯ್ಯಪ್ಪ ಅವರು ಕ್ರೀಡಾಪಟುಗಳಿಗೆ ಶುಭ ಹಾರೈಸಿ, ಕ್ಲಬ್ ವತಿಯಿಂದ ಆಯೋಜಿಸಿದ್ದ ಕ್ರೀಡಾಕೂಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಹಕಾರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಮುಂಡಂಡ ಪವಿ ಸೋಮಣ್ಣ ವಹಿಸಿದ್ದರು. ವೇದಿಕೆಯಲ್ಲಿ ಕ್ಲಬ್‌ನ ಗೌರವ ಕಾರ್ಯದರ್ಶಿ ಮೇರ್ಕಜೆ ಲೋಹಿತ್ ಸೋಮಯ್ಯ, ನಿರ್ದೇಶಕರಾದ ಪುದಿಯೊಕ್ಕಡ ಪೊನ್ನು ಮುತ್ತಪ್ಪ, ಮೂಡೇರ ಮನು ಮಾದಪ್ಪ, ಕೋಟೇರ ಮೇದಪ್ಪ, ಪುದಿಯೊಕ್ಕಡ ಕಾಶಿ ಕರುಂಬಯ್ಯ, ಬೈಲೆ ತಿಮ್ಮಯ್ಯ, ಪೆಮ್ಮಂಡ ಪವಿತ್ರ, ಕ್ಲಬ್‌ನ ಮಾಜಿ ಅಧ್ಯಕ್ಷರಾದ ಚೇನಂಡ ಅಶೋಕ್, ಪಳಂಗಂಡ ಅಪ್ಪಣ್ಣ ಹಾಗೂ ಪುದಿಯೊಕ್ಕಡ ಬೆಲ್ಲು ಸೋಮಯ್ಯ ಉಪಸ್ಥಿತರಿದ್ದರು. ಮೂಡೇರ ಹರೀಶ್ ಕಾಳಯ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.










