ಮಡಿಕೇರಿ ನ.25 NEWS DESK : ಸ್ವತಂತ್ರ ಭಾರತದ ಪ್ರಪ್ರಥಮ ಸೇನಾ ಮಹಾದಂಡನಾಯಕ ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಪದ್ಮಭೂಷಣ ಕೆ.ಎಸ್.ತಿಮ್ಮಯ್ಯ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅವಮಾನಿಸಿದ ಪ್ರಕರಣವನ್ನು ತೀವ್ರವಾಗಿ ಖಂಡಿಸುವುದಾಗಿ ಕೊಡಗು ಜಿಲ್ಲಾ ನಿವೃತ್ತ (ಮಾಜಿ)ಯೋಧರ ಒಕ್ಕೂಟ ಅರೆ ಸೇನಾಪಡೆಯ ಸಂಚಾಲಕ ಹಾಗೂ ಕಾರ್ಯದರ್ಶಿ ಎನ್.ಎಂ.ಭೀಮಯ್ಯ ಅವರು ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಅವರು ಫೀ.ಮಾ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರನ್ನು ಅವಹೇಳನ ಮಾಡಿ ಶಾಂತಿ ಕದಡಲು ಯತ್ನಿಸಿದ ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು. ಇದೇ ಸಂದರ್ಭ ದೊಡ್ಡ ಬಳ್ಳಾಪುರದಲ್ಲಿ ಸಿಆರ್‍ಪಿಎಫ್ ಮಾಜಿ ಯೋಧ ಅನಂತರಾಜ್ ಗೋಪಾಲ್ ಹಾಗೂ ಅವರ ಕುಟುಂಬದವರ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಎನ್.ಎಂ.ಭೀಮಯ್ಯ ತೀವ್ರವಾಗಿ ಖಂಡಿಸಿದರು. ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಲಾಗಿದ್ದು, ಗ್ರಾಮದ ರಾಜಕೀಯ ಮುಖಂಡರು ಒತ್ತಾಯ ಪೂರ್ವಕವಾಗಿ ರಾಜಿ ಸಂಧಾನಕ್ಕೆ ಪ್ರಯತ್ನಿಸುತ್ತಿದ್ದಾರೆ. ಹಲ್ಲೆ ಪ್ರಕರಣ ಮರುಕಳಿಸುತ್ತಲೇ ಇದ್ದು, ಜೀವ ಬೆದರಿಕೆ ಕೂಡ ಹಾಕಿರುವ ಆರೋಪವಿದೆ. ಆದ್ದರಿಂದ ಯಾವುದೇ ರಾಜಿ ಸಂಧಾನಕ್ಕೆ ಅವಕಾಶ ಕಲ್ಪಿಸದೆ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ರಾಜಿ ಸಂಧಾನಕ್ಕೆ ಒಪ್ಪದ ಮಾಜಿ ಯೋಧ ಹಾಗೂ ಅವರ ಕುಟುಂಬವನ್ನು ತೊಂದರೆಗೆ ಸಿಲುಕಿಸುವ ಷಡ್ಯಂತ್ರ ನಡೆಯುತ್ತಿರುವುದರಿಂದ ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ದೇಶಸೇವೆ ಮಾಡಿದ ಮಾಜಿ ಯೋಧರನ್ನು ಅವಮಾನಿಸುವ ಮತ್ತು ದೌರ್ಜನ್ಯ ನಡೆಸುವ ಪ್ರಕರಣಗಳು ಮರುಕಳಿಸದಂತೆ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎನ್.ಎಂ.ಭೀಮಯ್ಯ ಆಗ್ರಹಿಸಿದರು.