ಸುಂಟಿಕೊಪ್ಪ ನ.25 NEWS DESK : ಕೊಡಗರಹಳ್ಳಿಯ ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಶಾಲಾಭಿವೃದ್ಧಿಗಾಗಿ ರಾಜ್ಯ ಒಕ್ಕಲಿಗರ ಸಂಘದ ಕೊಡಗು ಪ್ರತಿನಿಧಿ ಮತ್ತು ಕಾರ್ಯರ್ದಯಕ್ಷರು ಆಗಿರುವ ಹರಪಳ್ಳಿ ರವೀಂದ್ರ ರೂ.3 ಲಕ್ಷ ದೇಣಿಗೆ ನೀಡಿದರು. ನಂತರ ಮಾತನಾಡಿದ ಅವರು, ಜೀವನದಲ್ಲಿ ಏನೇ ಕಷ್ಟ-ನಷ್ಟಗಳು ಸವಾಲುಗಳು ಎದುರಾದರೂ ಹೆದರಬಾರದು ಧೈರ್ಯದಿಂದ ಎದುರಿಸಿ ಮುನ್ನಗಬೇಕು. ವಿದ್ಯಾಭ್ಯಾಸದಲ್ಲಿ ಶೇ.100 ಅಂಕಗಳನ್ನು ತೆಗೆಯುವ ಜೋತೆಗೆ ಜೀವನದಲ್ಲೂ ಶೇ.100 ರಷ್ಟು ಸಾಧನೆ ಮಾಡಿ ಗೆಲ್ಲಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕನ್ನಡ ನಮ್ಮ ಮಾತೃಭಾಷೆಯಾಗಿದ್ದು, ಅತ್ಯಂತ ಸಂಪತ್‍ಭರಿತ ಜ್ಞಾನ ತುಂಬಿದ ಭಾಷೆಯಾಗಿದೆ. ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳ ಸಮರ್ಥ ಬಳಕೆಯಿಂದ ನಾವು ನಮ್ಮ ಜೀವನ ಉದ್ಯೋಗದಲ್ಲಿ ಉನ್ನತ ಸಾಧನೆಯನ್ನು ಮಾಡಬಹುದಾಗಿದೆ ಎಂದು ಹರಪಳ್ಳಿ ರವೀಂದ್ರ ಕಿವಿಮಾತು ಹೇಳೀದರು. ಶಾಲೆಯ ಆವರಣ, ಶುಚಿತ್ವ ಹಾಗೂ ವಿದ್ಯಾರ್ಥಿಗಳ ಶಿಸ್ತಿನ ನಡವಳಿಕೆಯನ್ನು ಶ್ಲಾಘಿಸಿದ ಅವರು ಇದಕ್ಕೆ ಕಾರಣರಾದ ಶಾಲಾ ಶಿಕ್ಷಕರ ವೃಂದ ಶಾಲಾ ಆಡಳಿತ ಮಂಡಳಿಯ ಸದಸ್ಯರನ್ನು ಅಭಿನಂದಿಸಿದರು. ಶಾಲಾ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಕೆ.ಎಸ್.ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಶಾಲೆಯ ಹಳೆಯ ವಿದ್ಯಾರ್ಥಿ, ನಿವೃತ್ತ ಉಪ ಅರಣ್ಯಾ ಸಂರಕ್ಷಣಾಧಿಕಾರಿ ಎಂ.ಎಸ್.ಸುರೇಶ್ ಚಂಗಪ್ಪ, ಮಾಜಿ ಸೈನಿಕ ಪಿ.ಎಸ್.ಲಕ್ಷ್ಮೀನಾರಾಯಣ, ಪ್ರಮುಖರಾದ ಖಾಸಿಂ, ಬಸಪ್ಪ, ಶಾಲಾ ಮುಖ್ಯೋಪಾದ್ಯಾಯನಿ ಕೆ.ಎಸ್.ಇಂದಿರಾ ಹಾಗೂ ಶಾಲಾ ಶಿಕ್ಷಕ ವೃಂದದವರು ಇದ್ದರು. ಕಾರ್ಯಕ್ರಮದ ಮೊದಲಿಗೆ ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಶಾಲಾ ಮುಖ್ಯೋಪಾದ್ಯಾಯನಿ ಕೆ.ಎಸ್.ಇಂದಿರಾ ಸ್ವಾಗತಿಸಿ, ಸಹಶಿಕ್ಷಕ ಗುರ್ಕಿ ನಿರೂಪಿಸಿ ವಂದಿಸಿದರು.