ಕುಶಾಲನಗರ ನ.25 NEWS DESK : ಕನ್ನಡ ನಾಡು – ನುಡಿ, ಕಲೆ, ಆಚಾರ, ವಿಚಾರಗಳ ಸಂರಕ್ಷಣೆ ಹಾಗೂ ಸಂವರ್ಧನೆಗೆ ಆಟೋ ಚಾಲಕರ ಕೊಡುಗೆ ಶ್ಲಾಘನೀಯವಾಗಿದ್ದು, ಚಾಲಕರು ಕನ್ನಡ ನಾಡು ನುಡಿಯ ರಾಯಭಾರಿಗಳು ಎಂದು ಕುಶಾಲನಗರ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಬಣ್ಣಿಸಿದ್ದಾರೆ. ಕೂಡಿಗೆಯ ಉದ್ಭವ ಸುಬ್ರಮಣ್ಯ ಸ್ವಾಮಿ ಆಟೋ ಚಾಲಕರ ಸಂಘದ ವತಿಯಿಂದ ಕೂಡಿಗೆಯ ಮುಖ್ಯ ವೃತ್ತದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕನ್ನಡ ಭಾಷೆ ನಶಿಸಿದರೆ ಒಂದು ಸಂಸ್ಕೃತಿಯೇ ನಶಿಸುತ್ತದೆ. ಹಾಗಾಗಿ ಶತ ಶತಮಾನಗಳಿಂದ ಜತನದಿಂದ ಜೋಪಾನವಾಗಿ ಸಂರಕ್ಷಿಸಿ ಕೊಂಡು ಬಂದಿರುವ ಕನ್ನಡ ಭಾಷೆಯನ್ನು ಶಕ್ತಿ ಶಾಲಿಗೊಳಿಸುವ ಮೂಲಕ ಸೌಹಾರ್ದದ, ಸಾಮರಸ್ಯದ, ಭಾವನಾತ್ಮಕವಾದ ನಾಡು ಕಟ್ಟಿರುವ ಕನ್ನಡದ ರಸ ಋಷಿಗಳನ್ನು ಈ ಸಂದರ್ಭ ಸ್ಮರಿಸಿದ ಶಶಿಧರ್, ವಚನ ಸಾಹಿತ್ಯ, ದಾಸ ಸಾಹಿತ್ಯ ಮೊದಲಾದ ಸಾಹಿತ್ಯದ ಪ್ರಾಕಾರಗಳು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿವೆ ಎಂದು ಹೇಳಿದರು. ಆಟೋ ಚಾಲಕ ವೃತ್ತಿಯೊಂದಿಗೆ ಸಾಮಾಜಿಕ ಸೇವೆಯತ್ತ ದಾಪುಗಾಲಿಟ್ಟಿರುವುದು ಪ್ರಶಂಸನೀಯ ಎಂದು ಆಟೋ ಚಾಲಕರ ಬಗ್ಗೆ ಶಶಿಧರ್ ಮೆಚ್ಚುಗೆ ವ್ಯಕ್ತಪಡಿಸಿದರು. ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದೀಪಿಕಾ ಮೂರ್ತಿ ಮಾತನಾಡಿ, ದಿನವಿಡೀ ಆಟೋ ಚಾಲನೆಯೊಂದಿಗೆ ಬದುಕು ಕಟ್ಟಿರುವ ಆಟೋ ಚಾಲಕರು ತಮ್ಮಲ್ಲಿ ಬರುವ ವಲಸಿಗ ಅನ್ಯ ಭಾಷಿಗರೊಂದಿಗೆ ಕನ್ನಡದಲ್ಲಿ ಮಾತನಾಡುವ ಮೂಲಕ ಕನ್ನಡ ಕಲಿಸಬೇಕಿದೆ. ಜೊತೆಗೆ ಆರೋಗ್ಯದ ಕಡೆಗೂ ಚಾಲಕರು ಒತ್ತು ನೀಡಬೇಕೆಂದು ಕರೆಕೊಟ್ಟರು. ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ ನಾಯಕ್ ಮಾತನಾಡಿ, ಆಟೋ ಚಾಲಕರು ಬೇರೆ ಬೇರೆ ಭಾಷಿಗರೊಂದಿಗೆ ಕನ್ನಡದಲ್ಲಿ ಮಾತನಾಡುವ ಮೂಲಕ ಕನ್ನಡದ ಬೆಳವಣಿಗೆಗೆ ಪಣತೊಡಬೇಕು ಎಂದರು. ಗ್ರಾಪಂ ಸದಸ್ಯ ಚಂದ್ರು ಮೂಡ್ಲಿಗೌಡ, ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಸ್.ಎ.ಯೋಗೇಶ್, ಪತ್ರಕರ್ತರಾದ ಕೆ.ಕೆ.ನಾಗರಾಜಶೆಟ್ಟಿ ಮಾತನಾಡಿದರು. ಆಟೋ ಚಾಲಕರ ಸಂಘದ ಅಧ್ಯಕ್ಷ ರಮೇಶ್, ಕಾರ್ಯದರ್ಶಿ, ರಕ್ಷಿತ್, , ರವಿ, ಪ್ರೀತಂ, ಗಣೇಶ, ಪ್ರಕಾಶ್, ಕೆ.ರಮೇಶ್, ಯೋಗೇಶ್, ಪುಟ್ಟರಾಜು, ಕೃಷ್ಣ, ಮೊದಲಾದವರಿದ್ದರು. ರಾಜ್ಯೋತ್ಸವದ ಅಂಗವಾಗಿ ಸ್ಥಳೀಯ ಪೌರಕಾರ್ಮಿಕರಿಗೆ ಆಹಾರದ ಕಿಟ್ ವಿತರಿಸುವ ಜೊತೆಗೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಿದವು.
ಆಟೋ ಚಾಲಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜು ನಿರೂಪಿಸಿದರು.