ವಿರಾಜಪೇಟೆ ನ.26 NEWS DESK : ಪ್ರಧಾನ ಮಂತ್ರಿ ಉಚ್ಛತ ಶಿಕ್ಷಣ ಅಭಿಯಾನದಡಿಯಲ್ಲಿ ವಿರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಂಪ್ಲಯೇಬಿಲೀಟಿ ಸ್ಕೀಲ್ಸ್ (Employability Skills) ಎಂಬ ವಿಷಯದ ಕುರಿತು ಕಾಲೇಜು ಪ್ರಾಧ್ಯಾಪಕರು ಮತ್ತು ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಒಂದು ದಿನದ ಕಾರ್ಯಾಗಾರ ನಡೆಯಿತು. ಕರ್ನಾಟಕ ಸರಕಾರ, ಕಾಲೇಜು ಶಿಕ್ಷಣ ಇಲಾಖೆ, ವಿರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ನಡೆದ ಕಾರ್ಯಗಾರವನ್ನು ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾಕುಶಾಲಪ್ಪ ಉದ್ಘಾಟಿಸಿ ಮಾತನಾಡಿ, ಉದ್ಯೋಗ ಪಡೆಯಲು ಅಂಕದ ಜೊತೆಗೆ ಮೌಲ್ಯಾಧಾರಿತ ಕೌಶಲ್ಯ ಕೂಡ ಅಗತ್ಯ. ವಿದ್ಯಾರ್ಥಿಗಳು ತಮ್ಮಲ್ಲಿರುವ ಕೌಶಲ್ಯವನ್ನು ವಿಕಸನಗೊಳಿಸಲು ಈ ರೀತಿಯ ಕಾರ್ಯಾಗಾರ ಮಹತ್ವವಾಗಿದೆ.ಈ ಮೂಲಕ ಕಲಿಯುವ ಮನೋಭಾವನೆಯನ್ನು ವಿದ್ಯಾರ್ಥಿಗಳು ಬೆಳಸಿಕೊಳ್ಳಬೇಕು ಎಂದು ಹೇಳಿದರು. ಕೊಡಗು ಜಿಲ್ಲಾ ಉದ್ಯೋಗಾಧಿಕಾರಿ ಮತ್ತು ಕೌಶಲ್ಯ ಅಧಿಕಾರಿ ರೇಖಾಗಣಪತಿ ಮಾತನಾಡಿ, ಕೇಂದ್ರ ಸರಕಾರದಂತೆ ರಾಜ್ಯ ಸರಕಾರ ಕೂಡ ಕೌಶಲ್ಯ ಅಭಿವೃದ್ಧಿ ಇಲಾಖೆಯನ್ನು ಆರಂಭಿಸಿ ಅನೇಕ ವೃತ್ತಿಪರ ಶಿಕ್ಷಣವನ್ನು ನೀಡುತ್ತಿದೆ. ವಿದ್ಯಾರ್ಥಿಗಳು ಕೌಶಲ್ಯ ವೃತ್ತಿಪರ ತರಬೇತಿಗೆ ತಮ್ಮ ಹೆಸರನ್ನು ನೊಂದಾಯಿಸುವಂತೆ ಕರೆ ನೀಡಿದರು. ಪದವಿ ಮುಗಿದ ವಿದ್ಯಾರ್ಥಿಗಳು ಯುವ ನಿಧಿ ಯೋಜನೆಗೆ ತಮ್ಮ ಹೆಸರನ್ನು ನೊಂದಾಯಿಸಿ ಅನೂಕುಲ ಪಡೆಯುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಸಿ.ದಯಾನಂದ ವಿದ್ಯಾರ್ಥಿಗಳು ಇಂದಿನ ಸ್ಫರ್ಧಾತ್ಮಕ ಯುಗದಲ್ಲಿ ಉದ್ಯೋಗ ಅವಕಾಶಗಳನ್ನು ಪಡೆಯಬೇಕಾದರೆ ಅವರಿ ಕಠಿಣ ಶ್ರಮದ ಜೊತೆಗೆ ಹಲವಾರು ಉದ್ಯೋಗಕ್ಕೆ ಸಂಬಂಧಿಸಿದ ಕೌಶಲ್ಯಗಳು ಅತ್ಯಾಗತ್ಯ ಎಂದು ಹೇಳಿದರು. ಕಾರ್ಯಾಗಾರದಲ್ಲಿ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳಾದ ಆರ್. ಕೆಬಾಲಚಂದ್ರ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮತ್ತು ಪ್ರಾಧ್ಯಾಪಕರುಗಳಿಗೆ ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಹೇಗೆ ಎದುರಿಸುವುದು ಮತ್ತು ಸ್ಫರ್ಧಾತ್ಮಕ ಪರೀಕ್ಷೆಗಳಲ್ಲಿ ಬರಬಹುದಾದ ಸಾಮಾನ್ಯ ಪ್ರಶ್ನೆಗಳ ಮಾದರಿಯನ್ನು ಮತ್ತು ಬಹಳ ಸುಲಭವಾಗಿ ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಬೇಕಾದ ಹಲವಾರು ಕೌಶಲ್ಯಗಳನ್ನು ಪ್ರಾಯೋಗಿಕ ಮತ್ತು ಸೈಧಾಂತಿಕ ವಿಧಾನಗಳನ್ನು ವಿವರಿದರು. ಕಾಲೇಜಿನ ಅಂತರೀಕ ಗುಣಮಟ್ಟ ಭರವಸಾ ಕೋಶ ಮತ್ತು ಯೋಜನೆಯ ಸಂಚಾಲಕರಾದ ಪಿ.ಎಂ.ಉಷಾ, ಡಾ. ಕೆ.ಬಸವರಾಜು ಮತ್ತು ಕಾರ್ಯಾಗಾರದ ಸಂಚಾಲಕ ಆರ್.ರಘುರಾಜ್ ಹಾಜರಿದ್ದರು.
ಸಮಾರಂಭದಲ್ಲಿ ಕಾರ್ಯಾಗಾರದ ಸಂಚಾಲಕ ಆರ್.ರಘುರಾಜ್ ಸ್ವಾಗತಿಸಿದರು. ಕಾಲೇಜಿ ನಿರ್ವಾಹಣಾ ವಿಭಾಗದ ಉಪನ್ಯಾಸಕಿ ಧನ್ಯ ನಿರೂಪಿಸಿದರು. ವಾಣಿಜ್ಯಶಾಸ್ತ್ರದ ಮುಖ್ಯಸ್ಥರಾದ ಧಮಯಂತಿ ವಂದಿಸಿದರು. ಕರ್ನಾಟಕ ರಾಜ್ಯದ ವಿವಿಧ ಕಾಲೇಜುಗಳಿಂದ ಸುಮಾರು 200ಕ್ಕೂ ಹೆಚ್ಚು ಪ್ರಾಧ್ಯಾಪಕರುಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.