ಮಡಿಕೇರಿ ನ.26 NEWS DESK : ವಿಶ್ವದ ಬೃಹತ್ ಲಿಖಿತ ಸಂವಿಧಾನವನ್ನು ಹೊಂದಿರುವ ಭಾರತವು ಪ್ರಗತಿ ಪಥದತ್ತ ಸಾಗುವಲ್ಲಿ ಅಂಬೇಡ್ಕರ್ ಅವರ ಕೊಡುಗೆ ಹೆಚ್ಚಿನದ್ದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ತಿಳಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ನಡೆದ `ಸಂವಿಧಾನ ದಿನಾಚರಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವೈವಿಧ್ಯತೆಯಿಂದ ಕೂಡಿರುವ ರಾಷ್ಟ್ರಕ್ಕೆ ಹಲವು ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ರಾಷ್ಟ್ರಕ್ಕೆ ಉತ್ತಮ ಸಂವಿಧಾನ ನೀಡುವಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಶ್ರಮಿಸಿದ್ದಾರೆ. ಆ ನಿಟ್ಟಿನಲ್ಲಿ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಆರ್. ಐಶ್ವರ್ಯ ಹೇಳಿದರು. 1949 ನವೆಂಬರ್, 26 ರಂದು ಸಂವಿಧಾನವನ್ನು ಸಮರ್ಪಿಸಿಕೊಂಡ ದಿನವಾಗಿದ್ದು, ಈ ದಿನವನ್ನು ಸಂವಿಧಾನ ದಿನಾಚರಣೆ ಎಂದು ಸಮರ್ಪಣಾ ಭಾವದಿಂದ ಆಚರಿಸಲಾಗುತ್ತಿದೆ ಎಂದರು. ಭಾರತ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳು, ಕರ್ತವ್ಯಗಳು ಹಾಗೂ ರಾಜ್ಯ ನಿರ್ದೇಶಕ ತತ್ವಗಳು ರಾಷ್ಟ್ರದ ಅಭಿವೃದ್ಧಿಗೆ ಪ್ರಮುಖ ಪಾತ್ರವಾಗಿವೆ. ಸಂವಿಧಾನದಲ್ಲಿ ಮಹಿಳೆಯರು ಸೇರಿದಂತೆ ಎಲ್ಲರಿಗೂ ಸಮಾನವಾದ ಅವಕಾಶಗಳನ್ನು ಕಲ್ಪಿಸಲಾಗಿದೆ. ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವಕ್ಕೆ ಸಂವಿಧಾನದಲ್ಲಿ ಒತ್ತು ನೀಡಲಾಗಿದೆ ಎಂದು ಆರ್.ಐಶ್ವರ್ಯ ಅವರು ವಿವರಿಸಿದರು.
ಪ್ರತಿಯೊಬ್ಬರೂ ಸಂವಿಧಾನದ ಆಶಯದಂತೆ ಜೀವನ ರೂಪಿಸಿಕೊಳ್ಳಲು ಪ್ರಯತ್ನಿಸಬೇಕು. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿ ಅವಕಾಶಗಳಿದ್ದು, ಅವುಗಳನ್ನು ಪಡೆಯಲು ಶಿಕ್ಷಣದಿಂದ ಮಾತ್ರ ಸಾಧ್ಯ. ಆ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರಿಯಬೇಕು ಎಂದು ಹೇಳಿದರು. ಸ್ವಾವಲಂಬನೆಯ ಹಾದಿಯಲ್ಲಿ ರಾಷ್ಟ್ರ ಸಾಗುತ್ತಿದ್ದು, ವೈವಿದ್ಯತೆಯಲ್ಲಿ ಏಕತೆ ಹೊಂದಿರುವ ರಾಷ್ಟ್ರವಾಗಿದೆ. ವಿವಿಧ ಭಾಷೆ, ಜನಾಂಗ, ಧರ್ಮ, ಆಚಾರ, ವಿಚಾರ, ಸಂಸ್ಕೃತಿಯನ್ನು ಹೊಂದಿದ್ದರೂ ಸಹ, ರಾಷ್ಟ್ರದಲ್ಲಿ ನಾವೆಲ್ಲರೂ ಸಂವಿಧಾನದ ಅಡಿಯಲ್ಲಿ ಸರ್ವ ಸಮಾನರಾಗಿ ಬದುಕುವುದನ್ನು ಸಂವಿಧಾನ ಕಲ್ಪಿಸಿದೆ ಎಂದು ಅವರು ನುಡಿದರು.’ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಆತ್ಮಗೌರವ ಹಾಗೂ ಸ್ವಾಭಿಮಾನದ ಬದುಕನ್ನು ಸಾಗಿಸಲು ಮೂಲಭೂತ ಹಕ್ಕುಗಳು ಮತ್ತು ಅವಕಾಶ ಸಂವಿಧಾನದಲ್ಲಿ ನೀಡಲಾಗಿದೆ ಎಂದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಮಾಧ್ಯಮ ರಂಗ ಒಂದು ರೀತಿ ಫಿಲ್ಲರ್ ಆಗಿದ್ದು, ಸಂವಿಧಾನ ಆಶಯಗಳನ್ನು ಸಂರಕ್ಷಿಸುವಲ್ಲಿ ತಮ್ಮದೇ ಆದ ಪಾತ್ರ ವಹಿಸುತ್ತವೆ ಎಂದು ಹೇಳಿದರು. ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರ ಬೆಳವಣಿಗೆಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಸ್ವಾತಂತ್ರ್ಯ ನಂತರ ಸಂವಿಧಾನ ಸಮರ್ಪಣೆ ಮಾಡಿಕೊಂಡು ಪ್ರತಿಯೊಬ್ಬರಿಗೂ ಸಮಾನತೆ, ಸಮಾನ ಅವಕಾಶಗಳು ಲಭ್ಯವಾಗುತ್ತಿವೆಯೇ ಎಂಬುದನ್ನು ಆತ್ಮವಲೋಕನ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು. ಸ್ವಾತಂತ್ರ್ಯ ನಂತರ ಎಲ್ಲರಿಗೂ ಅವಕಾಶಗಳು ತಲುಪಿವೆಯೇ ಎಂಬ ಬಗ್ಗೆ ಚಿಂತಿಸಬೇಕು. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಪ್ರತಿಯೊಬ್ಬರಿಗೂ ಇದೆಯೇ ಎಂಬುದನ್ನು ಅವಲೋಕನ ಮಾಡಿಕೊಳ್ಳಬೇಕು ಎಂದರು. ಮನುಷ್ಯ ಮನುಷ್ಯನನ್ನು ಗೌರವಿಸಬೇಕು. ಮಹಿಳೆಯರು ಸೇರಿದಂತೆ ಶಿಕ್ಷಣವನ್ನು ಪ್ರತಿಯೊಬ್ಬರೂ ಪಡೆಯಬೇಕು. ಶಿಕ್ಷಣದಿಂದ ಮಾತ್ರ ಸಮಾಜ ಬದಲಾವಣೆ ಸಾಧ್ಯ ಎಂಬುದನ್ನು ಅಂಬೇಡ್ಕರ್ ಅವರು ಒತ್ತು ಹೇಳಿದ್ದಾರೆ. ಸಂವಿಧಾನದ ಆಶಯದಂತೆ ಪ್ರತಿಯೊಬ್ಬರೂ ನಡೆದುಕೊಳ್ಳಬೇಕು. ಅಂಬೇಡ್ಕರ್ ಅವರನ್ನು ಪ್ರತಿ ನಿತ್ಯ ಸ್ಮರಿಸಬೇಕು. ಧ್ವನಿ ಇಲ್ಲದವರಿಗೆ ಅವಕಾಶಗಳು ತಲುಪಬೇಕು ಎಂದು ಸುಂದರ್ ರಾಜ್ ತಿಳಿಸಿದರು. ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಪ್ರಕಾಶ್ ಮಾತನಾಡಿ, ಅಂಬೇಡ್ಕರ್ ಅವರ ಸತತ ಪ್ರಯತ್ನದಿಂದ ಮತ್ತು ಸರ್ವ ಸಮರ್ಪಣಾ ಭಾವದಿಂದ ಜಗತ್ತಿನ ಅತೀ ಶ್ರೇಷ್ಠ ಸಂವಿಧಾನವನ್ನು ರಾಷ್ಟ್ರಕ್ಕೆ ನೀಡಿದ್ದಾರೆ ಎಂದರು. ಸಂವಿಧಾನ ರಚನಾ ಸಮಿತಿಯಲ್ಲಿ ಕರಡು ಸಮಿತಿಯು ಪ್ರಮುಖವಾಗಿದ್ದು, ಡಾ.ಬಿ.ಆರ್.ಅಂಬೇಡ್ಕರ್ ಅವರು ಈ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ ಎಂದರು. ಸಂವಿಧಾನ ರಚನಾ ಕಾರ್ಯವು ಪೂರ್ಣಗೊಂಡ ನಂತರ 1949 ರ ನವೆಂಬರ್, 26 ರಂದು ಸಂವಿಧಾನವನ್ನು ಅಂಗೀಕರಿಸಲಾಗುತ್ತದೆ. ನಂತರ 1950ರ ಜನವರಿ, 26 ರಂದು ಸಂವಿಧಾನ ಜಾರಿಗೆ ಬರುತ್ತದೆ ಎಂದರು.
ಸಂವಿಧಾನ ಜಾರಿಗೆ ಬಂದಾಗ 395 ವಿಧಿಗಳು, 8 ಅನುಸೂಚಿಗಳು, 22 ಭಾಗಗಳಿದ್ದವು. ಪ್ರಸ್ತುತ 450 ವಿಧಿಗಳು, 12 ಅನುಸೂಚಿಗಳು ಹಾಗೂ 25 ಭಾಗಗಳನ್ನು ಒಳಗೊಂಡಿದೆ ಎಂದು ಪ್ರಕಾಶ್ ವಿವರಿಸಿದರು. ಸಂವಿಧಾನದ ಮೂರನೇ ಭಾಗದಲ್ಲಿ ಮೂಲಭೂತ ಹಕ್ಕುಗಳಿದ್ದು, 6 ನೇ ಮೂಲಭೂತ ಹಕ್ಕಾದ ಸಂವಿಧಾನ ಮತ್ತು ಪರಿಹಾರ ಹಕ್ಕನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಆತ್ಮ ಮತ್ತು ಹೃದಯ ಎಂದು ಕರೆದಿದ್ದಾರೆ. ಮೂಲಭೂತ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ತಿಳಿಸಲಾಗಿದೆ ಎಂದರು. ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಶೇಖರ್ ಮಾತನಾಡಿ, ಅಂಬೇಡ್ಕರ್ ಅವರ ದೂರದೃಷ್ಟಿ, ಅಗಾಧ ಜ್ಞಾನ ರಾಶಿ ಹಾಗೂ ಪರಿಕಲ್ಪನೆ ರಾಷ್ಟ್ರದ ಅಭಿವೃದ್ಧಿಗೆ ಪ್ರಸ್ತುತವಾಗಿದೆ ಎಂದು ಹೇಳಿದರು. ವಿದ್ಯಾರ್ಥಿ ನಿಲಯ ಮೇಲ್ವಿಚಾರಕರಾದ ರೇಖಾ ಭಾರತದ ಸಂವಿಧಾನದ ಪೀಠಿಕೆ ವಾಚಿಸಿದರು. ತಹಶೀಲ್ದಾರ್ ಪ್ರವೀಣ್ ಕುಮಾರ್, ಜಿ.ಪಂ.ಸಹಾಯಕ ಕಾರ್ಯದರ್ಶಿ ಅಬ್ದುಲ್ ನಬಿ, ಪೌರಾಯುಕ್ತರಾದ ಎಚ್.ಎನ್.ರಮೇಶ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ಎಚ್.ಎಲ್.ದಿವಾಕರ, ತಾಲ್ಲೂಕು ಸಂಚಾಲಕರಾದ ದೀಪಕ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಸಿ.ರಂಗಧಾಮಪ್ಪ, ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ಲಿಂಗರಾಜು ದೊಡ್ಡಮನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ನಟರಾಜ, ಜಿಲ್ಲಾ ಆಯುಷ್ ಅಧಿಕಾರಿ ಡಾ.ರೇಣುಕಾ ದೇವಿ, ಖಜಾನಾ ಇಲಾಖೆಯ ಉಪ ನಿರ್ದೇಶಕರಾದ ರಘುನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ್, ಜಿಲ್ಲಾ ಸಾಂಖ್ಯಿಕ ಅಧಿಕಾರಿ ನಾರಾಯಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಶಿವಶಂಕರ ಇತರರು ಇದ್ದರು.