ಮಡಿಕೇರಿ ನ.26 NEWS DESK : ನಗರದ ತ್ಯಾಗರಾಜ ಕಾಲೋನಿ ಅಂಗನವಾಡಿ ಕೇಂದ್ರದಲ್ಲಿ ಬಾಲ ಮೇಳ ಕಾರ್ಯಕ್ರಮ ನಡೆಯಿತು. ವಿವಿಧ ರೀತಿಯ ಛದ್ಮವೇಷ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳು ಉತ್ತಮ ರೀತಿಯಲ್ಲಿ ಕಾರ್ಯಕರ್ತೆ ಅಂಬಿಕಾ, ಸಹಾಯಕಿ ಲೀಲಾವತಿಯವರ ಸಹಕಾರದಿಂದ ತಮ್ಮನ್ನು ತೊಡಗಿಸಿಕೊಂಡರು. ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಮೇಪಾಡಂಡ ಸವಿತಾ ಕೀರ್ತನ್ ಅವರ ಕೋರಿಕೆ ಮೇರೆಗೆ ಸಮಾಜ ಸೇವಕರು ಯೋಗಾ ಶಿಕ್ಷಕರಾದ ಗೀತ ಗಿರೀಶ್ ಅಂಗನವಾಡಿ ಮಕ್ಕಳಿಗೆ 20 ತಟ್ಟೆ 20 ಲೋಟಗಳನ್ನು ಉಡುಗೊರೆಯಾಗಿ ನೀಡಿದರು. ನಂತರ ಮಾತನಾಡಿದ ಗೀತಾ ಗಿರೀಶ್ ಪೋಷಕರು, ಶಿಕ್ಷಕರು ಹಾಗೂ ಇಲಾಖಾಧಿಕಾರಿಗಳ ಒಟ್ಟು ಸೇರುವಿಕೆಯು ಅರ್ಥಪೂರ್ಣ ಕಾರ್ಯಕ್ರಮವಾಗಿದೆ ಎಂದರು. ಮಕ್ಕಳ ಆರೋಗ್ಯವೇ ಇಂದಿನ ಶ್ರೀಮಂತಿಕೆ, ಆರೋಗ್ಯಯುತ ಆಹಾರ ನೀಡಿ, ಜಂಕ್ ಫುಡ್ ಗಳ ದಾಸರಾಗಬೇಡಿ, ಕಡಿಮೆ ಖರ್ಚಿನಲ್ಲಿ ಉತ್ತಮ ತರಕಾರಿಗಳು ಹಣ್ಣುಗಳ ಸೇವನೆ ಆರೋಗ್ಯಕ್ಕೆ ಪೂರಕ ಎಂಬ ಕಿವಿಮಾತು ಹೇಳಿದರು. ಪರಿಸರರೊಂದಿಗೆ ಮಕ್ಕಳು ಬೆಳೆಯಬೇಕು. ಮಕ್ಕಳ ಪ್ರಶ್ನೆಗೆ ಪೋಷಕರು, ಶಿಕ್ಷಕರು ಸರಿಯಾದ ಉತ್ತರ ನೀಡಬೇಕು. ಪ್ರತಿ ಮಗುವಿನಲ್ಲೂ ಪ್ರತಿಭೆ ಇದೆ ಅದಕ್ಕೆ ಪೂರಕ ವಾತಾವರಣ ಹಾಗೂ ಪ್ರೋತ್ಸಾಹ ನೀಡುವ ಗುರುತರ ಜವಾಬ್ದಾರಿ ಪೋಷಕರು ಹಾಗೂ ಶಿಕ್ಷಕಿಯರದ್ದು ಎಂದರು. ಒಳ್ಳೆಯ ಆಹಾರ, ನಿದ್ದೆ ಹಾಗೂ ನಿಯಮಿತ ಆಟಗಳಿಂದ ಮಗುವಿನ ಪರಿಪೂರ್ಣ ಬೆಳವಣಿಗೆ ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಸಮಾಜ ಸೇವಕರು ಹಾಗೂ ಮಡಿಕೇರಿ ನಗರಾಭಿವೃದ್ಧಿ ಸದಸ್ಯರಾದ ಮಿನಾಜ್ ಪ್ರವೀಣ್ ಮಾತನಾಡಿ, ಮಕ್ಕಳ ಪ್ರತಿಭೆಯನ್ನು ಪ್ರಾರಂಭದಲ್ಲೇ ಗುರುತಿಸಿ ಅವರಲ್ಲಿ ಧೈರ್ಯ ತುಂಬಲು ಈ ವೇದಿಕೆ ಬಹಳ ಸಹಕಾರಿಯಾಗಿದೆ ಇಂಥ ಕಾರ್ಯಕ್ರಮ ಹೆಚ್ಚು ಹೆಚ್ಚು ನಡೆಯಬೇಕು ಎಂದು ತಿಳಿಸಿದರು. ಕೇಂದ್ರದ ಮಕ್ಕಳಿಗೆ ಬೇಕಾದ ವಸ್ತುಗಳ ಬೇಡಿಕೆಯನ್ನು ಈ ದಿನ ತಿಳಿಸಿದ್ದು ಅದರಲ್ಲಿ ಚಾಪೆ ಮತ್ತು ಜಮಕಾನವನ್ನು ತಾವು ನೀಡುವುದಾಗಿ ತಿಳಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ ಪ್ರತಿ ತಿಂಗಳು ನಡೆಯುವ ತಾಯಂದಿರ ಸಭೆಯಲ್ಲಿ ಆ ತಿಂಗಳಲ್ಲಿ ಮಕ್ಕಳು ಕಲಿತ ಚಟುವಟಿಕೆಗಳ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿ ಕೊಡಬೇಕು, ಇದರಿಂದ ಮಕ್ಕಳ ಪ್ರತಿಭೆ ಹೊರಹೊಮ್ಮಲು ಸಹಕಾರಿಯಾಗುತ್ತದೆ ಎಂದರು. ರಾಸಾಯನಿಕ ಮುಕ್ತ ತರಕಾರಿಗಳನ್ನು ಮಕ್ಕಳಿಗೆ ಪ್ರಾರಂಭದಲ್ಲೇ ಬೆಳೆಸಲು, ಬಳಸಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪೋಷಕರಿಂದ ಮಕ್ಕಳ ಹೆಸರಿನ ತರಕಾರಿ ಪಾಟ್‍ಗಳನ್ನು ಅಂಗನವಾಡಿ ಕೇಂದ್ರಕ್ಕೆ ಉಡುಗೊರೆಯಾಗಿ ಕೊಡಲು ಕೋರಿಕೊಂಡರು. ಸಮುದಾಯದಲ್ಲಿರುವ ದಾನಿಗಳ ಸಹಕಾರ ಪಡೆದು ಬಾಲವಿಕಾಸ ಸಮಿತಿಯವರು ಹೊರಂಗಣ ಒಳಾಂಗಣ ಆಟಿಕೆ ಹಾಗೂ ಮಾದರಿ ಅಂಗನವಾಡಿ ಕೇಂದ್ರಕ್ಕೆ ಬೇಕಾಗುವ ವಸ್ತುಗಳನ್ನು ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯೊಂದಿಗೆ ಸೇರಿ ಪಡೆದು ಕೇಂದ್ರವನ್ನು ಮಾದರಿ ಕೇಂದ್ರವನ್ನಾಗಿ ಮಾಡಲು ಕೋರಿದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಯೂಥ್ ಮುಮೆಂಟ್‍ನ ಯೋಜನೆಗಳನ್ನು ಶೋಭಾ ರವರು ತಿಳಿಸಿದರು. ಕಸಬಾ ವೃತ್ತದ 24 ಅಂಗನವಾಡಿ ಕೇಂದ್ರದ ಕಾರ್ಯಕರ್ತರು, ತ್ಯಾಗರಾಜ್ ಕಾಲೋನಿ ಅಂಗನವಾಡಿ ಕೇಂದ್ರದ ಫಲಾನುಭವಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.