ಕೂಡಿಗೆ ಡಿ.2 NEWS DESK : ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆ ಗ್ರಾಮದ ಗ್ರಾಮದೇವತೆ ಬನಶಂಕರಿ ದೇವರ ವಾರ್ಷಿಕೋತ್ಸವದ ಅಂಗವಾಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ನಡೆದ ಎತ್ತಿನ ಗಾಡಿ ಓಟದ ಸ್ಪರ್ಧೆ ಸಾರ್ವಜನಿಕರ ಗಮನ ಸೆಳೆಯಿತು. ಸ್ಪರ್ಧೆಯಲ್ಲಿ ದೂರ ದೂರದ ಊರುಗಳಿಂದ ಆಗಮಿಸಿದ ಹತ್ತಾರು ಜೋಡಿ ಎತ್ತುಗಳು ಪಾಲ್ಗೊಂಡವು. ಬೆಳಗ್ಗೆಯಿಂದಲೂ ಎಡಬಿಡದೇ ಸುರಿದ ಮಳೆಯ ನಡುವೆಯೂ ನಡೆದ ಎತ್ತಿನ ಗಾಡಿ ಓಟದ ಸ್ಪರ್ಧೆಯನ್ನು ನೋಡಿ ಮಕ್ಕಳಾದಿಯಾಗಿ ವೃದ್ದರು ಹಾಗೂ ಮಹಿಳೆಯರು ಸಂಭ್ರಮಿಸಿದರು. ಗಾಡಿಗಳ ಚಕ್ರಗಳನ್ನು ಕಟ್ಟಿ ಎತ್ತುಗಳಿಂದ ವೇಗವಾಗಿ ಎಳೆಯಿಸಿ ನಿಗಧಿ ಪಡಿಸಿದ್ದ. ಕೆಲವೇ ನಿಮಿಷಗಳ ಕಾಲಾವಕಾಶಗಳಲ್ಲಿ ಗುರಿ ತಲುಪಿಸಲು ಎತ್ತುಗಳಿಗೆ ಚಾವಟಿ ಕೋಲುಗಳಿಂದ ಹೊಡೆಯುತ್ತಾ ಚೀರುತ್ತಾ ಇದ್ದಂತಹ ಪಾಲಕರ ಈ ಸ್ಪರ್ಧಾ ಕೂಟ ಒಂದು ರೀತಿ ಹರ ಸಾಹಸದಂತಿತ್ತು. ಎಲ್ಲಡೆಗಳಲ್ಲಿ ಎತ್ತಿನ ಗಾಡಿ ಓಟದ ಸ್ಪರ್ಧೆಯಲ್ಲಿ ಮಂಚೂಣಿಯಲ್ಲಿರುವಂತಹ ಮಂಡ್ಯದಿಂದ ಕರೆತಂದಿದ್ದ ” ಅಣ್ಣಪ್ಪ ” ಎಂಬ ಎತ್ತನ್ನು ಈ ಸಂದರ್ಭ ಪೂಜಿಸಲಾಯಿತು. ಸ್ಪರ್ಧೆಯಲ್ಲಿ ಚಿಕ್ಕಮಂಗಳೂರು, ಕಡೂರು, ಹಾಸನ, ಮಂಡ್ಯ, ಸಾಲಿಗ್ರಾಮ, ಹುದುಗೂರು ಸೇರಿದಂತೆ ವಿವಿಧೆಡೆಗಳಿಂದ ಅತ್ಯಾಕರ್ಷಕ ಮೈಕಟ್ಟಿನ ಎತ್ತುಗಳನ್ನು ವಾಹನಗಳಲ್ಲಿ ತರಲಾಗಿತ್ತು.
ಗ್ರಾಮದ ದೇವತಾ ಸಮಿತಿ ಪದಾಧಿಕಾರಿಗಳು ಹಾಗೂ ಮಾದರಿ ಯುವಕ ಸಂಘದ ಪದಾಧಿಕಾರಿಗಳು ಈ ಸಂದರ್ಭ ಇದ್ದರು.
ವರದಿ : ಕೆ.ಆರ್.ಗಣೇಶ್