ಪೊನ್ನಂಪೇಟೆ, ಡಿ.7 NEWS DESK : ಕ್ರೀಡೆ ಎಂಬುದು ಸಂಘಟಿತ, ಸ್ಪರ್ಧಾತ್ಮಕ ಮತ್ತು ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆಯಾಗಿದೆ. ಈ ಕಾರಣದಿಂದ ಕ್ರೀಡೆ ಪರಸ್ಪರ ಮನಸ್ಸುಗಳನ್ನು ಬೆಸೆಯುತ್ತದೆ. ಅದರಿಂದ ಕ್ರೀಡೆಗಳಲ್ಲಿ ಸೋಲು ಗೆಲುವಿನ ಲೆಕ್ಕಾಚಾರಗಳಿಗಿಂತ ಭಾಗವಹಿಸುವಿಕೆ ಅತಿ ಮುಖ್ಯ ಎಂದು ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಅಜ್ಜಿಕುಟ್ಟೀರ ಎಸ್. ನರೇನ್ ಕಾರ್ಯಪ್ಪ ಅಭಿಪ್ರಾಯಪಟ್ಟಿದ್ದಾರೆ. ಬಿಟ್ಟಂಗಾಲ ಸಮೀಪದ ವಿ.ಬಾಡಗದ ಹೈ ಪ್ಲೈಯರ್ಸ್ ಸಂಸ್ಥೆಯ ವತಿಯಿಂದ ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಬಿಟ್ಟಂಗಾಲ, ಬಿ. ಶೆಟ್ಟಿಗೇರಿ ಮತ್ತು ಹಾತೂರು ಗ್ರಾ. ಪಂ. ವ್ಯಾಪ್ತಿಯಲ್ಲಿ ಐನ್ ಮನೆ ಹೊಂದಿರುವ ಕೊಡವ ಮನೆತನಗಳ ನಡುವಿನ 3ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ‘ಹೈ ಪ್ಲೈಯರ್ಸ್ ಕಪ್-2024’ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿಗೆ ಕೊಡಗಿನ ಗ್ರಾಮೀಣ ಮಟ್ಟದಲ್ಲಿ ಕ್ರೀಡಾಕೂಟಗಳು ಹೆಚ್ಚು ಆಯೋಜನೆಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದರಿಂದಾಗಿ ಸೂಕ್ತ ಅವಕಾಶಗಳ ಕೊರತೆ ಎದುರಿಸುತ್ತಿದ್ದ ಗ್ರಾಮೀಣ ಕ್ರೀಡಾಪಟುಗಳಿಗೆ ಹೆಚ್ಚು ಅನುಕೂಲವಾಗುತ್ತಿದೆ ಎಂದು ಹೇಳಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ಹಾಕಿ ಕೂರ್ಗ್ ಸಂಸ್ಥೆಯ ಅಧ್ಯಕ್ಷ ಪಳಂಗಂಡ ಲವಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಹಾಕಿ ಕ್ರೀಡಾಕೂಟಗಳು ನಿರಂತರವಾಗಿ ನಡೆಯುತ್ತಿರುವುದು ಆಶಾದಾಯಕವಾಗಿದೆ. ಆದರೆ ಶಾಲಾ ವಿದ್ಯಾರ್ಥಿಗಳ ತಂಡಗಳಿಗಾಗಿ ಹಾಕಿ ಕ್ರೀಡಾಕೂಟ ಕೊಡಗಿನಲ್ಲಿ ಹೆಚ್ಚಾಗಿ ನಡೆಯುತ್ತಿಲ್ಲ. ಈ ಬಗ್ಗೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಹಾಕಿ ಕರ್ನಾಟಕದ ಮಹಾಸಭೆಯಲ್ಲೂ ಗಂಭೀರ ಚರ್ಚೆ ನಡೆದಿದೆ. ಅದರಿಂದ ಮುಂದೆ ಹಾಕಿ ಕೂರ್ಗ್ ಸಂಸ್ಥೆ ಶಾಲಾ ತಂಡಗಳಿಗಾಗಿ ಹಾಕಿ ಪಂದ್ಯಾವಳಿಗಳನ್ನು ಆಯೋಜಿಸಲು ಮುಂದಾಗಲಿದೆ ಎಂದು ತಿಳಿಸಿದರಲ್ಲದೆ, ಕೊಡಗಿನ ಕ್ರೀಡಾ ಸಂಘಟನೆಗಳು ಕೂಡ ಶಾಲಾ ತಂಡಗಳಿಗಾಗಿ ಹಾಕಿ ಪಂದ್ಯಾವಳಿಗಳನ್ನು ನಡೆಸಲು ವಿಶೇಷ ಒತ್ತು ನೀಡಬೇಕು ಎಂದು ಕರೆ ನೀಡಿದರು. ವಿ. ಬಾಡಗ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕಂಜಿತಂಡ ಗಿಣಿ ಮೊಣ್ಣಪ್ಪ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ಹಾಕಿ ಕ್ರೀಡೆಗೆ ಉತ್ತೇಜನ ನೀಡುವ ಉದ್ದೇಶದಿಂದ ಕಳೆದ ಮೂರು ವರ್ಷಗಳ ಹಿಂದೆ ರೂಪುಗೊಂಡ ಹೈ ಪ್ಲೈಯರ್ಸ್ ಸಂಸ್ಥೆ, ವಿ. ಬಾಡಗದಂಥ ಗ್ರಾಮೀಣ ಪ್ರದೇಶದಲ್ಲಿ ಐದು ದಿನಗಳ ಕಾಲ ವ್ಯವಸ್ಥಿತವಾದ ಹಾಕಿ ಪಂದ್ಯಾವಳಿಯನ್ನು ಆಯೋಜಿಸುತ್ತಿರುವುದು ಶ್ಲಾಘನೀಯವಾಗಿದೆ. ಈ ಕಾರಣದಿಂದ ಸ್ಥಳೀಯ ಶಾಲೆಯ ಮೈದಾನವನ್ನು ಹೈ ಪ್ಲೈಯರ್ಸ್ ಅತ್ಯುತ್ತಮವಾಗಿ ನಿರ್ವಹಿಸುತ್ತಿದ್ದು, ಇದು ಇಡೀ ಜಿಲ್ಲೆಯಲ್ಲಿ ಮಾದರಿ ಹಾಕಿ ಮೈದಾನವಾಗಿ ರೂಪುಗೊಂಡಿದೆ. ವಿ. ಬಾಡಗ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ಪ್ರಸಕ್ತ ಸಾಲಿನಲ್ಲಿ ಆದರ್ಶ ಶಿಕ್ಷಣ ಸಂಸ್ಥೆ ಎಂಬ ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನವಾಗಿದ್ದು, ಈ ಸಾಧನೆಗೆ ಹೈ ಪ್ಲೈಯರ್ಸ್ ಸಂಸ್ಥೆಯೂ ಪ್ರಮುಖ ಪಾತ್ರವಹಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸ್ಥೆಯ ಸಲಹಾ ಸಮಿತಿ ಅಧ್ಯಕ್ಷರಾದ ಮಳವಂಡ ಗಿರೀಶ್ ಮುದ್ದಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ತಂಡದ ಮಾಜಿ ಹಾಕಿ ಆಟಗಾರ್ತಿ ಕಂಬಿರಂಡ ಶಾರದಾ ಅಯ್ಯಪ್ಪ, ವಿ.ಬಾಡಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಕೆ.ಸಿ. ಗೀತಾಂಜಲಿ ಮೊದಲಾದವರು ಮಾತನಾಡಿದರು. ವೇದಿಕೆಯಲ್ಲಿ ಬಾಟಾ ಇಂಡಿಯಾದ ಮಾಜಿ ಉಪಾಧ್ಯಕ್ಷರಾದ ಚೇಮಿರ ಸನ್ನು ಪೊನ್ನಪ್ಪ ಉಪಸ್ಥಿತರಿದ್ದರು. ಇದಕ್ಕೂ ಮೊದಲು ಹೈ ಪ್ಲೈಯರ್ಸ್ ಕಪ್-2024ರ ವಿಜೇತರಿಗೆ ನೀಡಲಾಗುವ ಆಕರ್ಷಕ ಟ್ರೋಫಿಗಳನ್ನು ವೇದಿಕೆಯಲ್ಲಿ ಅನಾವರಣಗೊಳಿಸಲಾಯಿತು. ನಂತರ ಅಜ್ಜೀಕುಟ್ಟೀರ ಎಸ್. ನರೇನ್ ಕಾರ್ಯಪ್ಪ ಅವರು ಮೈದಾನದಲ್ಲಿ ಆಟಗಾರರನ್ನು ಪರಿಚಯಿಸಿಕೊಂಡು ಹಾಕಿ ಸ್ಟಿಕ್ಕಿನಿಂದ ಚೆಂಡನ್ನು ತಳ್ಳುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು. ಪಂದ್ಯಾವಳಿ ಉದ್ಘಾಟಿಸಲು ಅತಿಥಿಗಳನ್ನು ಸಾಂಪ್ರದಾಯಿಕ ಎರವರ ಚೀನಿದುಡಿ ವಾದ್ಯದೊಂದಿಗೆ ಮೈದಾನಕ್ಕೆ ಕರೆದುಕೊಂಡು ಬರಲಾಯಿತು. ಉಳುವಂಗಡ ಲೋಹಿತ್ ಭೀಮಯ್ಯ ಪ್ರಾರ್ಥಿಸಿದರು. ಹೈಪ್ಲೈಯರ್ಸ್ ಸಂಸ್ಥೆಯ ಅಧ್ಯಕ್ಷರಾದ ಅಮ್ಮಣಿಚಂಡ ರಂಜು ಪೂಣಚ್ಚ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವೀಕ್ಷಕ ವಿವರಣೆಗಾರರಾದ ವಿನೋದ್ ಕಾರ್ಯಕ್ರಮ ನಿರೂಪಿಸಿದರು. ಅಮ್ಮಣಿಚಂಡ ರೋಹಿತ್ ವಂದಿಸಿದರು.