
ಮಡಿಕೇರಿ ಡಿ.7 NEWS DESK : ಕೇಂದ್ರ ಸರಕಾರದಿಂದ ಕೊಡಮಾಡುವ ಪ್ರತಿಷ್ಠಿತ ದೀನ್ ದಯಾಳ್ ಪಂಚಾಯತ್ ವಿಕಾಸ್ ಪುರಸ್ಕಾರಕ್ಕೆ ರಾಜ್ಯದಿಂದ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮ ಪಂಚಾಯಿತಿ ಆಯ್ಕೆಯಾಗುವ ಮೂಲಕ ಪ್ರಶಸ್ತಿ ಪಟ್ಟಿಯಲ್ಲಿ ಸ್ಥಾನ ಪಡೆದ ರಾಜ್ಯದ ಏಕೈಕ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಡತನ ನಿರ್ಮೂಲನೆ, ಜಿವನೋಪಾಯ ಅಭಿವೃದ್ಧಿ ಅಂಶದಡಿ ಈ ಪುರಸ್ಕಾರವನ್ನು ಗಾಳಿಬೀಡು ಗ್ರಾ.ಪಂ ಪಡೆದುಕೊಂಡಿದ್ದು, ಡಿ.11 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಪಂಚಾಯತ್ ರಾಜ್ ಸಚಿವಾಲಯ ಅಧಿಕೃತವಾಗಿ ತಿಳಿಸಿದೆ. ಗಾಳಿಬೀಡು ಗ್ರಾ.ಪಂ ಗ್ರಾಮಸ್ಥರ ಜೀವನಮಟ್ಟ ಸುಧಾರಣೆಗೆ ಅನೇಕ ಕಾರ್ಯಕ್ರಮ ಕೈಗೊಂಡಿದೆ. ಮೂಲಭೂತ ಸೌಕರ್ಯವನ್ನು ಸಮರ್ಪಕವಾಗಿ ಒದಗಿಸಿ ಜೀವನೋಪಾಯ ಅಭಿವೃದ್ಧಿಗೊಳಿಸಿದೆ. ಶಾಲೆಯಲ್ಲಿ ಉದ್ಯಾನ, ಶೌಚಾಲಯ ವ್ಯವಸ್ಥೆ, ಸರೋವರ ನಿರ್ಮಾಣದ ಮೂಲಕ ಪ್ರವಾಸೋದ್ಯಮದ ಅಭಿವೃದ್ದಿ, ಜನರಿಗೆ ಅಗತ್ಯ ದಾಖಲೆ, ಫಲಾನುಭವಿಗಳಿಗೆ ಪಿಂಚಣಿ ವ್ಯವಸ್ಥೆ, ಅಂಗನವಾಡಿ ಮಕ್ಕಳಿಗೆ ಪೌಷ್ಠಿಕಾಂಶ ಆಹಾರ ವಿತರಣೆ, ಸ್ವಸಹಾಯ ಸಂಘಕ್ಕೆ ಆರ್ಥಿಕ ನೆರವು ನೀಡಿ ಸ್ವಾವಲಂಬಿಗೊಳಿಸಲು ಮಾಡಿದ ಕೆಲಸ, ಮನೆ ಮನೆಗೆ ನೈಸರ್ಗಿಕವಾಗಿ ಕುಡಿಯುವ ನೀರಿನ ಸರಬರಾಜು ಸೇರಿದಂತೆ ಇನ್ನಿತರ ಕೆಲಸಗಳನ್ನು ಪರಿಗಣಿಸಿ ಈ ಪುರಸ್ಕಾರಕ್ಕೆ ಪಂಚಾಯಿತಿ ಪಾತ್ರವಾಗಿದೆ ಎಂದು ಅಭಿವೃದ್ಧಿ ಅಧಿಕಾರಿ ಶಶಿಕಿರಣ್ ತಿಳಿಸಿದ್ದಾರೆ.











