ಮಡಿಕೇರಿ ಡಿ.9 NEWS DESK : ಹೆಬ್ಬಾಲೆ ಗ್ರಾ.ಪಂ ವ್ಯಾಪ್ತಿಯ ಮರೂರು, ಹುಲುಸೆ ಗ್ರಾಮದಲ್ಲಿ ಕಾಡಾನೆ ಹಾವಳಿಯಿಂದ ಕೃಷಿ ಫಸಲು ನಷ್ಟವಾಗುತ್ತಿರುವ ಹಿನ್ನೆಲೆ ರೈತರು ಕಂಗಾಲಾಗಿದ್ದಾರೆ. ಗ್ರಾಮದ ಬೆಳೆಗಾರರಾದ ಕಪಿನಪ್ಪ, ರಾಜಶೇಖರ, ಶಿವಕುಮಾರ್, ಶಿವರುದ್ರಪ್ಪ, ಗಣೇಶ್, ಸೇರಿದಂತೆ 10ಕ್ಕೂ ಹೆಚ್ಚು ರೈತರ ಜಮೀನುಗಳಿಗೆ ನುಗ್ಗಿದ ಕಾಡಾನೆಗಳು ಭತ್ತ, ತೆಂಗು, ಸಹಿ ಗೆಣಸು ಹಾಗೂ ಬಾಳೆ ಸೇರಿದಂತೆ ಇನ್ನಿತರ ಬೆಳೆಗಳನ್ನು ತುಳಿದು ನಾಶಪಡಿಸಿವೆ. ಬಾಣಾವರ ಮೀಸಲು ಅರಣ್ಯ ಮತ್ತು ಜೇನುಕಲ್ಲು ಬೆಟ್ಟದ ಕಡೆಯಿಂದ ಕಾಡಾನೆಗಳು ಗದ್ದೆ, ತೋಟಗಳಿಗೆ ಇಡುತ್ತಿದ್ದು, ಸಂಬಂಧಪಟ್ಟ ಅರಣ್ಯ ಇಲಾಖೆ ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರಿಸಬೇಕು. ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸ್ಧಳಕ್ಕೆ ಹೆಬ್ಬಾಲೆ ಉಪ ವಲಯ ಅರಣ್ಯಾಧಿಕಾರಿ ಭರತ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಹಾರವನ್ನು ನೀಡುವ ಭರವಸೆ ನೀಡಿದ್ದಾರೆ.