
ಮಡಿಕೇರಿ NEWS DESK ಡಿ.11 : ಸಾಮಾಜಿಕ ಜಾಲತಾಣಗಳಲ್ಲಿ ದೇಶದ ವೀರ ಸೇನಾನಿಗಳಾದ ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರುಗಳಿಗೆ ಅಗೌರವ ತೋರಿದ ಪ್ರಕರಣವನ್ನು ತೀವ್ರವಾಗಿ ಖಂಡಿಸುವುದಾಗಿ ಗೋಣಿಕೊಪ್ಪಲು ಕಾವೇರಿ ಪೊಮ್ಮಕ್ಕಡ ಕೂಟ ಸಂಘಟನೆ ತಿಳಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಕೂಟದ ಅಧ್ಯಕ್ಷರು, ಆಡಳಿತ ಮಂಡಳಿ ಹಾಗೂ ಸರ್ವ ಸದಸ್ಯರು, ಕೊಡಗು ಸರ್ವ ಜನಾಂಗಗಳ ಒಕ್ಕೂಟ ಡಿ.12 ರಂದು ಬೆಳಿಗ್ಗೆ 6ಗಂಟೆಯಿ0ದ ಮಧ್ಯಾಹ್ನ 12 ಗಂಟೆಯವರೆಗೆ ಕರೆ ನೀಡಿರುವ ಕೊಡಗು ಬಂದ್ ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.
ಕೊಡಗಿನ ಹೆಮ್ಮೆಯ ಪುತ್ರರಾದ ಫೀ.ಮಾ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿರುವ ವ್ಯಕ್ತಿಯನ್ನು ತಕ್ಷಣ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದ್ದಾರೆ. ಭಾರತೀಯ ಸೇನೆಯಲ್ಲಿ ಅಮೋಘ ಸೇವೆ ಸಲ್ಲಿಸಿ ವಿಶ್ವ ವಿಖ್ಯಾತಿ ಪಡೆದಿರುವ ಇಬ್ಬರು ವೀರ ಸೇನಾಧಿಕಾರಿಗಳ ಬಗ್ಗೆ ಅವಹೇಳನ ಮಾಡಿರುವುದನ್ನು ಸಹಿಸಿಕೊಂಡು ಇರಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಕಿಡಿಗೇಡಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬಂದ್ ಗೆ ಬೆಂಬಲ ನೀಡುತ್ತಿರುವುದಾಗಿ ಹೇಳಿದ್ದಾರೆ.








