ಮಡಿಕೇರಿ ಡಿ.12 NEWS DESK : ಕೊಡವ ನ್ಯಾಷನಲ್ ಕೌನ್ಸಿಲ್ ಆಶ್ರಯದಲ್ಲಿ 30ನೇ ವರ್ಷದ ಸಾರ್ವತ್ರಿಕ ಪುತ್ತರಿ ನಮ್ಮೆಯನ್ನು ಸಕಲ ಕೊಡವ ಜನಪದ ಪರಂಪರೆಯಂತೆ ರೋಹಿಣಿ ನಕ್ಷತ್ರದ ಆರಂಭದಲ್ಲಿ ಡಿ.14 ರಂದು ಪೂರ್ವಹ್ನ 10 ಗಂಟೆಗೆ ಬಾಳೆಲೆ ಹೋಬಳಿಯ ಪತ್ತ್ಕಟ್ ನಾಡ್ನ ಬಿಳೂರು ಗ್ರಾಮದ ಕಾಂಡೇರ ಸುರೇಶ್ರವರ ಭತ್ತದ ಗದ್ದೆಯಲ್ಲಿ ಕದಿರು ತೆಗೆಯುವ ಮೂಲಕ ಆಚರಿಸಲಾಗುವುದು ಎಂದು ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಸಾರ್ವತ್ರಿಕವಾಗಿ ಕೊಡವರ ಎಲ್ಲಾ ಹಬ್ಬ ಹರಿದಿನಗಳನ್ನು ಕಳೆದ ಮೂರು ದಶಕಗಳಿಂದ ಸಿಎನ್ಸಿ ಆಚರಿಸುತ್ತ ಬರುವ ಉದ್ದೇಶ ಅತೀ ಸಣ್ಣ ಕೊಡವ ಸಮುದಾಯದ ಜನ್ಮಭೂಮಿ ಹಾಗೂ ಪೂರ್ವಾರ್ಜಿತ ಭೂಮಿ, ಭಾಷೆ, ಸಂಸ್ಕೃತಿ, ಪರಂಪರೆ, ಜನಪದ ಮತ್ತು ಸ್ವಯಂ ನಿರ್ಣಯ ಹಕ್ಕುಗಳಿಗೆ ಸಂವಿಧಾನದ 14, 19, 21, 51ಎ(ಎಫ್), 29, 30, 25, 26, 347, 350 ಇವುಗಳ ಅನ್ವಯ 6 ಮತ್ತು 8ನೇ ಶೆಡ್ಯೂಲ್ ಒಳಗೊಂಡಂತೆ ರಾಜ್ಯಾಂಗದತ್ತ ಹಕ್ಕುಗಳ ಮಂಡನೆಗೆ ಪೂರಕವಾಗಿ ಮತ್ತು ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ಹಸ್ತಾಂತರಿಸುವ ಮತ್ತು ಉಳಿಸುವ ಉದ್ದೇಶದಿಂದ ಆಚರಿಸಲಾಗುತ್ತಿದೆ. ಬೆಳಿಗ್ಗೆ 10 ಗಂಟೆಗೆ ಗುರು-ಹಿರಿಯರನ್ನು ಅಂದರೆ ಪೂರ್ವಿಕರಾದ ಕಾರೋಣರು, ಕುಲ ಪಿತಾಮರು, ಜಲದೇವಿ ಕಾವೇರಿ, ಭೂದೇವಿ, ವನದೇವಿ, ಪರ್ವತ ದೇವಿ ಮತ್ತು ಸೂರ್ಯ-ಚಂದ್ರರನ್ನು ಭಕ್ತಿ ಭಾವದಿಂದ ನೆನೆದು ಕೊಡವರ ಧಾರ್ಮಿಕ ಸಂಸ್ಕಾರವಾದ ತೋಕ್-ಕತ್ತಿಗೆ ಶ್ರದ್ಧಾಪೂರ್ವಕ ಪೂಜೆ ನೆರವೇರಿಸಿ, ದುಡಿಕೊಟ್ಟ್ ಪಾಟ್ ಮೂಲಕ ಭತ್ತದ ಗದ್ದೆಗೆ ತೆರಳಿ ಕದಿರು ತೆಗೆದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಂಪ್ರದಾಯಿಕ ಕೊಡವ ಭಕ್ಷ್ಯಗಳ ಸ್ವೀಕಾರದ ಮೂಲಕ ಕಾರ್ಯಕ್ರಮ ಸಮಾರೋಪಗೊಳ್ಳಲಿದೆ ಎಂದು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.