
ಮಡಿಕೇರಿ ಡಿ.11 NEWS DESK : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ವಿವಿಧ ನಿಗಮಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮತ್ತು ರಾಜ್ಯ ಸರಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಕೊಡಗು ಜಿಲ್ಲಾ ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾದಿಂದ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಯಿತು. ಮೋರ್ಚಾದ ಜಿಲ್ಲಾಧ್ಯಕ್ಷ ಅಪ್ರು ರವೀಂದ್ರ ಅವರ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿಗಳು ಕಚೇರಿ ಎದುರು ಜಮಾಯಿಸಿದ ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ವಿವಿಧ ನಿಗಮಗಳಿಗೆ ಸೂಕ್ತ ಅನುದಾನ ಬಿಡುಗಡೆಯಾಗುತ್ತಿಲ್ಲವೆಂದು ಆರೋಪಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ನಗರಾಧ್ಯಕ್ಷ ಉಮೇಶ್ ಸುಬ್ರಮಣಿ, ವಕ್ತಾರ ಬಿ.ಕೆ.ಅರುಣ್ ಕುಮಾರ್, ಮಹಿಳಾ ಬಿಜೆಪಿ ಅಧ್ಯಕ್ಷೆ ಅನಿತಾ ಪೂವಯ್ಯ, ಎಸ್‍ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಪಿ.ಎಂ.ರವಿ, ಪ್ರಮುಖರಾದ ರವಿ ಕಾಳಪ್ಪ, ಕೆ.ಎಸ್.ರಮೇಶ್, ಅರುಣ್ ಶೆಟ್ಟಿ, ನಾಗೇಶ್ ಕುಂದಲ್ಪಾಡಿ, ಮನು ಮಂಜುನಾಥ್ ಮತ್ತಿತರ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.









