
ಮಡಿಕೇರಿ ಡಿ.13 NEWS DESK : 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು 2024ರ ಡಿ.20, 21 ಮತ್ತು 22 ರಂದು ಮಂಡ್ಯದಲ್ಲಿ ನಡೆಯಲಿದೆ. ಈ ಸಮ್ಮೇಳನದಲ್ಲಿ ಮೂರು ವೇದಿಕೆಗಳಿದ್ದು, 27 ವಿಚಾರಗೋಷ್ಠಿಗಳಲ್ಲಿ 150 ವಿದ್ವಾಂಸರು ನಾಡಿಗೆ ಸಂಬಂಧಿಸಿದ ವಿವಿಧ ವಿಚಾರಗಳ, ಸಮಸ್ಯೆಗಳ ಕುರಿತು ವಿಚಾರ ಮಂಡನೆ ಮಾಡಲಿದ್ದಾರೆ. “ಮಂಡ್ಯ ಜಿಲ್ಲೆಗೆ ಕೊಡುಗೆ ನೀಡಿದ ಮಹನೀಯರ ಕುರಿತು”, ಕನ್ನಡ ನಾಡಿನ ಜಲ ನೆಲ ಸಾಕ್ಷರತೆಯ ಕುರಿತು ಅವಲೋಕನ, “ಸಾಹಿತ್ಯದಲ್ಲಿ ರಾಜಕೀಯ – ರಾಜಕೀಯದಲ್ಲಿ ಸಾಹಿತ್ಯ” ಕರ್ನಾಟಕ 50 ಹಿನ್ನೋಟ- ಮುನ್ನೋಟ, ಕರ್ನಾಟಕದ ಮೌಖಿಕ ಪರಂಪರೆಗಳ ಪ್ರದರ್ಶನ ಮತ್ತು ವಿವರಣೆ, ಸಮ್ಮೇಳನ ಅಧ್ಯಕ್ಷರ ಜೊತೆಗೆ ಸಂವಾದ, ಜಾಗತಿಕ ನೆಲೆಯಲ್ಲಿ ಕನ್ನಡ ಕಟ್ಟುವ ಬಗ್ಗೆ, ಸರಕಾರಿ ಶಾಲೆಗಳ ಸಬಲೀಕರಣ ಹೀಗೆ ಹತ್ತು ಹಲವು ವಿಷಯದಲ್ಲಿ ವಿಚಾರಗೋಷ್ಠಿ ಯೋಜನೆಗೊಂಡಿವೆ. ನಾಲ್ಕು ಕವಿಗೋಷ್ಠಿಯನ್ನು ಆಯೋಜಿಸಲಾಗಿದ್ದು 83 ಕವಿಗಳು ಪಾಲ್ಗೊಳ್ಳಲಿದ್ದಾರೆ. ಈ ಬಾರಿ ವಿಶೇಷವಾಗಿ ಅಂಧರ ಕೈಗೋಷ್ಠಿ ಏರ್ಪಡಿಸಲಾಗಿದ್ದು 10 ಮಂದಿ ಅಂದ ಕವಿಗಳು ಕವನವಾಚನ ಮಾಡಲಿದ್ದಾರೆ. ಮಹಿಳಾ ಕವಿಗಳ ಕವಿಗೋಷ್ಠಿ ನಡೆಯಲಿದೆ. 87ನೇ ಸಾಹಿತ್ಯ ಸಮ್ಮೇಳನವಾದ್ದರಿಂದ 87 ಸಾಧಕರನ್ನು ಮತ್ತು ಕರ್ನಾಟಕ ಸುವರ್ಣ ಸಂಭ್ರಮದ ಕುರಿತು 50 ಸಾಧಕರನ್ನು ಒಟ್ಟಾಗಿ 137 ಸಾಧಕರನ್ನು ಸನ್ಮಾನಿಸಲಾಗುತ್ತಿದೆ. ಕೊಡಗು ಜಿಲ್ಲೆಯಿಂದ ವಿಶೇಷ ಆಹ್ವಾನಿತರು, ನೊಂದಾಯಿತ ಪ್ರತಿನಿಧಿಗಳು, ಸಾಹಿತ್ಯ ಪರಿಷತ್ತಿನ ಸದಸ್ಯರು, ಕನ್ನಡ ಅಭಿಮಾನಿಗಳು ಸೇರಿದಂತೆ 300 ಕ್ಕೂ ಹೆಚ್ಚು ಮಂದಿ ಸಮ್ಮೇಳನಕ್ಕೆ ಹೋಗುವ ತಯಾರಿ ನಡೆಸಿದ್ದಾರೆ. ಶತಮಾನ ರಜತ ಸುವರ್ಣ ಸಂಭ್ರಮ ಸಂಬಂಧಿಸಿದಂತೆ ವಿಶೇಷ ಉಪನ್ಯಾಸ ನಡೆಯಲಿದ್ದು, ಭಾರತದ ಸಂವಿಧಾನ 75 ಕುರಿತು ಕೊಡಗಿನ ಹಿರಿಯ ಸಾಹಿತಿಗಳಾದ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಉಪನ್ಯಾಸ ನೀಡಲಿದ್ದಾರೆ. ಪ್ರತಿ ಜಿಲ್ಲೆಯಿಂದ ಓರ್ವ ಸಾಧಕರನ್ನು ಸನ್ಮಾನಿಸಲಾಗುತ್ತಿದ್ದು ಕೊಡಗು ಜಿಲ್ಲೆಯಿಂದ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಆಕಾಶವಾಣಿ ಉಧ್ಗೋಷಕರು, ಯಕ್ಷಗಾನ ತಾಳ ಮದ್ದಳೆ ಪ್ರವೀಣರು, ಸಾಹಿತಿಗಳು ಆದ ಸುಬ್ರಾಯ ಸಂಪಾಜೆ ಇವರನ್ನು ಸನ್ಮಾನಿಸಲಾಗುತ್ತಿದೆ. ಕೊಡಗು ಜಿಲ್ಲೆಯಿಂದ ಕವಿಗೋಷ್ಠಿಗೆ ಕವಿಯತ್ರಿ, ಸಾಹಿತಿ ಕೆ.ಜಿ.ರಮ್ಯ ರವರನ್ನು ಆಯ್ಕೆ ಮಾಡಲಾಗಿದೆ. ಇದು ಕನ್ನಡಿಗರ ಹಬ್ಬ ಈ ಸಮ್ಮೇಳನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕೊಡಗಿನ ಕನ್ನಡ ಅಭಿಮಾನಿಗಳು ಭೇಟಿ ಕೊಡಬೇಕೆಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್ ಮನವಿ ಮಾಡಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.









