ವಿರಾಜಪೇಟೆ ಡಿ.18 NEWS DESK : ಮುಂಬರುವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರುವ ವಿದ್ಯಾರ್ಥಿಗಳ ಪದವಿ ಪೂರ್ವ ಕಾಲೇಜು ಶಿಕ್ಷಣಕ್ಕೆ ಸಂಸ್ಥೆಯ ವತಿಯಿಂದ ಸಹಕಾರ ನೀಡುವುದಾಗಿ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರೆ.ಫಾ. ಮದಲೈ ಮುತ್ತು ತಿಳಿಸಿದರು. ಪಟ್ಟಣದ ಸಂತ ಅನ್ನಮ್ಮ ವಿದ್ಯಾಸಂಸ್ಥೆಯಲ್ಲಿ ನಡೆದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಮೇಳದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಇಂದಿನ ವಿದ್ಯಾರ್ಥಿಗಳು ಹೆಚ್ಚುಹೆಚ್ಚಾಗಿ ಮೊಬೈಲ್ ಲೋಕದಲ್ಲಿ ಕಳೆದು ಹೋಗುವ ಮೂಲಕ ಕಲೆ ಸೇರಿದಂತೆ ದೈಹಿಕ ಚಟುವಟಿಕೆಗಳಿಂದ ದೂರವಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿ, ವಿದ್ಯಾರ್ಥಿಗಳು ಶಿಕ್ಷಣ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದರು. ಸಂತ ಅನ್ನಮ್ಮ ಪ್ರೌಢಶಾಲೆಯ ಮುಖ್ಯಶಿಕ್ಷಕ ಬೆನ್ನಿ ಜೋಸೆಫ್ ಮಾತನಾಡಿ, ಮುಂಬರುವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.95 ರಷ್ಟು ಅಂಕ ಪಡೆಯುವ ಯಾವುದೇ ವಿದ್ಯಾಸಂಸ್ಥೆಯ ವಿದ್ಯಾರ್ಥಿಗೆ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ಉಚಿತ ಶಿಕ್ಷಣವನ್ನು ನೀಡಲಾಗುವುದು ಎಂದು ಘೋಷಿಸಿದರು. ಸಂತ ಅನ್ನಮ್ಮ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ವಿರಾಜಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಜ್ಯೋತಿ ಪ್ರಕಾಶ್, ಸಂತ ಅನ್ನಮ್ಮ ಕಾಲೇಜಿನ ಉಪನ್ಯಾಸಕ ಡಾ.ಹೇಮಂತ್, ಪ್ರಾಥಮಿಕ ಶಾಲಾ ವಿಭಾಗಗಳ ಮುಖ್ಯಶಿಕ್ಷಕರು ಉಪಸ್ಥಿತರಿದ್ದು, ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿದರು.
ವಿರಾಜಪೇಟೆಯ ಕಾವೇರಿ ಶಾಲೆಯ ತಂಡವು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು. ಮೇಳದಲ್ಲಿ ಆಯೋಜಿಸಿದ್ದ ವಿವಿಧ 7 ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ತೋರಿ ಸಮಗ್ರ ಪ್ರಶಸ್ತಿ ಪಡೆದ ಕಾವೇರಿ ಶಾಲೆಯ ತಂಡವು ಆಕರ್ಷಕ ಟ್ರೋಫಿ ಹಾಗೂ 25,555 ರೂ ನಗದು ಬಹುಮಾನವನ್ನು ಪಡೆದುಕೊಂಡಿತು. ಮಿಶ್ರ ಕ್ರಿಕೆಟ್ ನಲ್ಲಿ ಲೂರ್ಡ್ಸ್ ಶಾಲೆಯು ಪ್ರಥಮ ಹಾಗೂ ಸಂತ ಅನ್ನಮ್ಮ ಅನುದಾನಿತ ಶಾಲೆಯು ದ್ವಿತೀಯ ಬಹುಮಾನವನ್ನು ಪಡೆದುಕೊಂಡಿತು. ಟ್ರಷರ್ ಹಂಟ್ ಸ್ಪರ್ಧೆಯಲ್ಲಿ ಕೂರ್ಗ್ ವ್ಯಾಲಿ ಶಾಲೆಯು ಪ್ರಥಮ ಬಹುಮಾನ ಪಡೆದುಕೊಂಡರೆ, ಮರ್ಕಜ್ ಶಾಲೆಯು ದ್ವಿತೀಯ ಬಹುಮಾನ ಪಡೆದುಕೊಂಡಿತು. ವಿಜ್ಞಾನ ಮಾದರಿ ತಯಾರಿಕೆಯಲ್ಲಿ ಕಾವೇರಿ ಶಾಲೆಯು ಪ್ರಥಮ ಹಾಗೂ ಮರ್ಕಜ್ ಶಾಲೆಯು ದ್ವಿತೀಯ ಬಹುಮಾನ ಪಡೆದುಕೊಂಡಿತು. ಆಹಾರ ಮೇಳದಲ್ಲಿ ಕಾವೇರಿ ಶಾಲೆಯು ಪ್ರಥಮ ಹಾಗೂ ಸಂತ ಅನ್ನಮ್ಮ ಅನುದಾನಿತ ಶಾಲೆಯು ದ್ವಿತೀಯ ಬಹುಮಾನವನ್ನು ಪಡೆದುಕೊಂಡಿತು. ನೃತ್ಯ ಸ್ಪರ್ಧೆಯಲ್ಲಿ ಕಾವೇರಿ ಶಾಲೆಯು ಪ್ರಥಮ ಬಹುಮಾನ ಪಡೆದುಕೊಂಡರೆ, ಎಸ್.ಎಂ.ಎಸ್ ಶಾಲೆಯು ದ್ವಿತೀಯ ಬಹುಮಾನ ಪಡೆಯಿತು. ಲಗೋರಿ ಸ್ಪರ್ಧೆಯಲ್ಲಿ ಎಸ್.ಎಂ.ಎಸ್ ಶಾಲೆಯು ಪ್ರಥಮ ಸ್ಥಾನ ಪಡೆದರೆ, ಲೂರ್ಡ್ಸ್ ಶಾಲೆಯು ದ್ವಿತೀಯ ಸ್ಥಾನ ಪಡೆಯಿತು. ರಸ ಪ್ರಶ್ನೆ ಸ್ಪರ್ಧೆಯಲ್ಲಿ ಕಾವೇರಿ ಶಾಲೆಯು ಪ್ರಥಮ ಬಹುಮಾನ ಪಡೆದರೆ, ಜ್ಞಾನಜ್ಯೋತಿ ಶಾಲೆಯು ದ್ವಿತೀಯ ಬಹುಮಾನ ಪಡೆದುಕೊಂಡಿತು. ಸಾಂಸ್ಕೃತಿಕ ಮೇಳದಲ್ಲಿ ಜಿಲ್ಲೆಯ ವಿವಿಧೆಡೆಯ ಸುಮಾರು 17ಕ್ಕು ಹೆಚ್ಚು ಶಾಲೆಗಳ ತಂಡಗಳು ಭಾಗವಹಿಸಿದ್ದವು. ಇದೇ ಮೊದಲ ಬಾರಿಗೆ ಪ್ರತಿ ಸ್ಪರ್ಧೆಗಳಲ್ಲಿ ಒಬ್ಬೊಬ್ಬ ಶಿಕ್ಷಕರು ಭಾಗವಹಿಸಲು ಅವಕಾಶ ಮಾಡಿಕೊಡಲಾಗಿತ್ತು. ಶಿಕ್ಷಕರು ತಮ್ಮ ವಿದ್ಯಾರ್ಥಿಗಳೊಂದಿಗೆ ನೃತ್ಯ, ಕ್ರಿಕೇಟ್, ಲಗೋರಿ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಆನಂದಿಸಿದರು.ಈ ಸಂದರ್ಭದಲ್ಲಿ ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.