ಬೆಂಗಳೂರು ಡಿ.18 NEWS DESK : ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಕಾರ್ಖಾನೆಯು 2023-24ನೇ ಸಾಲಿನಲ್ಲಿ ಮಾಡಿರುವ 362.07 ಕೋಟಿ ರೂಪಾಯಿ ಲಾಭದ ಪೈಕಿ 108.62 ಕೋಟಿ ರೂಪಾಯಿಗಳ ಲಾಂಭಾಂಶದ ಚೆಕ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮತ್ತು ಕಾರ್ಖಾನೆ ಅಧ್ಯಕ್ಷ ಸಿ.ಎಸ್.ನಾಡಗೌಡ ಹಸ್ತಾಂತರಿಸಿದರು. ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಇದೇ ಸಂದರ್ಭದಲ್ಲಿ ಐದು ಕೋಟಿ ರೂಪಾಯಿಗಳ ಚೆಕ್ ನೀಡಲಾಯಿತು. ಕಾರ್ಖಾನೆ ಇತಿಹಾಸದಲ್ಲಿ ಇಷ್ಟು ಮೊತ್ತದ ಲಾಭಾಂಶದ ಚೆಕ್ ನೀಡಿರುವುದು ಇದೇ ಮೊದಲು. ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು, ‘ಸಾರ್ವಜನಿಕ ಉದ್ದಿಮೆಗಳು ಲಾಭದಾಯಕ ವಹಿವಾಟು ನಡೆಸುವುದು ಒಳ್ಳೆಯ ಬೆಳವಣಿಗೆಯಾಗಿದೆ. ಐದು ವರ್ಷಗಳ ಹಿಂದೆ 15.91 ಕೋಟಿ ರೂಪಾಯಿ ಲಾಭಾಂಶ ಕೊಟ್ಟಿದ್ದ ಈ ಉದ್ದಿಮೆಯು ಈ ವರ್ಷ 108 ಕೋಟಿ ರೂ.ಗಳಿಗೂ ಹೆಚ್ಚಿನ ಡಿವಿಡೆಂಡ್ ಕೊಟ್ಟಿದೆ’ ಎಂದರು. ಈ ಸಂದರ್ಭ ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ವ್ಯವಸ್ಥಾಪಕ ನಿರ್ದೇಶಕ ಡಾ. ಪಿ.ಕೆ.ಎಂ.ಪ್ರಶಾಂತ್, ಕಾರ್ಖಾನೆ ಪ್ರಧಾನ ವ್ಯವಸ್ಥಾಪಕರಾದ ಕೆ.ಎಲ್.ರವೀಶ, ಗಂಗಪ್ಪ ಅವರು ಉಪಸ್ಥಿತರಿದ್ದರು.