




ಕುಶಾಲನಗರ ಡಿ.20 NEWS DESK : ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರೂರು ಗ್ರಾಮದ ಪ್ರಗತಿಪರ ಕೃಷಿಕ ಹೆಚ್.ಎಸ್.ಮಹೇಶ್ ಅವರ ತೋಟದಲ್ಲಿ ಕೃಷಿ ಕ್ಷೇತ್ರೋತ್ಸವ ನಡೆಯಿತು. ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿ ಡಾ.ವೀರೇಂದ್ರಕುಮಾರ್ ನೆರೆದಿದ್ದ ಕೃಷಿಕರಿಗೆ ಮಾಹಿತಿ ನೀಡಿದರು. 2013 ರಲ್ಲಿ ಪೆಪ್ಪರ್ ಗೆ ದೊರೆತ ಅತ್ಯಧಿಕ ದರಕ್ಕೆ ಮಾರು ಹೋದ ಬಹಳಷ್ಟು ಮಂದಿ ಕೃಷಿಕರು ಪೆಪ್ಪರ್ ಬೆಳೆಯತ್ತ ಮಾರುಹೋದರು. ಆದರೆ, ಪೆಪ್ಪರ್ ಬೆಳೆಯನ್ನು ಬೆಳೆಯುವ ವಿಧಾನಗಳನ್ನು ಅರಿಯದಾದ ಬಹಳಷ್ಟು ಮಂದಿ ಬೆಳೆಗಾರರು, ಪೆಪ್ಪರ್ ಗೆ ಬಾಧಿಸುವ ರೋಗಗಳನ್ನು ಹತೋಟಿ ಮಾಡಲಾಗದೇ ಬೆಳೆಯಿಂದ ವಿಮುಕ್ತರಾದರು. ಕುಶಾಲನಗರ ತಾಲ್ಲೂಕಿನಲ್ಲಿ ಪೆಪ್ಪರ್ ಬೆಳೆಗೆ ಸೂಕ್ತವಾದ ವಾತಾವರಣ ವಿದ್ದು ಬೆಳೆಗಾರರು ಮಿಶ್ರ ಮಾದರಿಯ ಪೆಪ್ಪರ್ ಗಿಡಗಳನ್ನು ಬೆಳೆಸುವಂತೆ ಸಲಹೆ ನೀಡಿದರು. ಕೊಡಗು ಜಿಲ್ಲೆಯಲ್ಲಿ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಪೆಪ್ಪರ್ ಬೆಳೆ ಕೈಗೊಳ್ಳಲಾಗಿದೆ. ಈ ಪೈಕಿ ಶೇ 80 ಭಾಗ ಪಣೀರ್ 1 ತಳಿಯದ್ದಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಹೊಸದಾಗಿ ಪೆಪ್ಪರ್ ಬೆಳೆಯತ್ತ ಆಸಕ್ತಿ ತೋರುವ ಕೃಷಿಕರು ತೇವಂ, ಶಕ್ತಿ, ಗಿರಿಮಂಡ ಸೇರಿದಂತೆ ಪಣೀರ್ 1 ರಿಂದ 9 ರವರೆಗಿನ ಹಲವು ತಳಿಯ ಗಿಡಗಳನ್ನು ಮಿಶ್ರವಾಗಿ ಪ್ರತೀ ವರ್ಷ ನಾಟಿ ಮಾಡುವಂತೆ ತಿಳಿಸಿದರು. ಕಟಾವಿಗೆ 15 ದಿನ ಮುನ್ನಾ ಹಾಗೂ ಕಟಾವಿನ ಬಳಿಕ 15 ಗಳ ವರೆಗೆ ಪೆಪ್ಪರ್ ಗಿಡಗಳಿಗೆ ನೀರು ಕಟ್ಟದಂತೆ ವಿಜ್ಞಾನಿಗಳು ಕರೆಕೊಟ್ಟರು. ಕೃಷಿ ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ದೇವರಾಜು, ಕೃಷಿ ವಿಸ್ತರಣಾ ಘಟಕದ ಸಹಪ್ರಾಧ್ಯಾಪಕ ಡಾ.ಬಸವಲಿಂಗಯ್ಯ ರೈತರಿಗೆ ಮಾಹಿತಿ ನೀಡಿದರು. ಮರೂರಿನ ಪ್ರಗತಿಪರ ಕೃಷಿಕ ಹೆಚ್.ಎಸ್.ಮಹೇಶ್ ತಮ್ಮ ನಾಲ್ಕು ಎಕರೆ ಬರಡು ಭೂಮಿಗೆ ನೀರು ಹರಿಸಿ ನಿರಂತರ ಶ್ರಮದಿಂದಾಗಿ ಹತ್ತಾರು ಮಾದರಿಯ ಸಮಗ್ರ ಕೃಷಿಗಳನ್ನು ಕೈಗೊಳ್ಳುವ ಮೂಲಕ ಸುತ್ತಮುತ್ತಲಿನ ಕೃಷಿಕರಿಗೆ ಮಾದರಿಯಾಗಿದ್ದಾರೆ ಎಂದು ಕೃಷಿ ವಿಜ್ಞಾನಿ ವೀರೇಂದ್ರಕುಮಾರ್ ಇದೇ ಸಂದರ್ಭ ಶ್ಲಾಘಿಸಿದರು. ಮರೂರು ಗ್ರಾಮದ ಪ್ರಗತಿಪರ ಕೃಷಿಕ ಶತಾಯುಷಿ ಹೆಚ್.ಎಸ್.ಶಿವರುದ್ರಪ್ಪ, ಹೆಬ್ಬಾಲೆಯ ಕೃಷಿಕರಾದ ಹೆಚ್.ಹೆಚ್.ರಾಜಶೇಖರ್, ಶೇಷಪ್ಪ, ಮಣಜೂರು ಗ್ರಾಮದ ಗುರುಲಿಂಗಪ್ಪ, ಎಸ್.ಕೆ.ಗಿರೀಶ್, ಹೆಚ್.ಎಸ್.ಶಿವಣ್ಣ, ಪ್ರಸನ್ನ, ಆನಂದ್, ಭಿಕ್ಷೇಶ್, ಹೆಚ್.ಎಸ್.ರಾಜಶೇಖರ್, ಶಿಕ್ಷಕಿಯೂ ಆದ ರೈತ ಮಹಿಳೆ ಹೆಚ್.ಎಸ್.ಸುನೀತಾ ಮಹೇಶ್, ಮಹದೇವಿ, ಕೆ.ಸಿ.ನಂಜುಂಡಸ್ವಾಮಿ, ಹೆಚ್.ಎಂ.ಬಸವಣ್ಣ, ಹುಲುಸೆ ಕಪನಪ್ಪ, ಮಹೇಶ್, ಬಸವರಾಜು ಮೊದಲಾದವರಿದ್ದರು. ಇದೇ ಸಂದರ್ಭ ಕೃಷಿ ವಿಜ್ಞಾನಿಗಳು ಹಾಗೂ ರೈತರೊಡಗೂಡಿ ತೋಟದಲ್ಲಿ ಕೃಷಿಕ ಮಹೇಶ್ ಸಾಮೂಹಿಕ ಭೋಜನದ ವ್ಯವಸ್ಥೆ ಮಾಡಿದ್ದರು.