ಮಡಿಕೇರಿ NEWS DESK ಏ.24 : ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರು ನಡೆಸಿರುವ ಅಮಾನವೀಯ ಕೃತ್ಯ ಖಂಡನೀಯವೆಂದು ಮೇಕೇರಿ ಗ್ರಾ.ಪಂ ಸದಸ್ಯ ಹಾಗೂ ಹಾಕತ್ತೂರು ಗ್ರಾ.ಪಂ ಮಾಜಿ ಅಧ್ಯಕ್ಷ ಎಂ.ಯು.ಹನೀಫ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಅಮಾಯಕ ಪ್ರವಾಸಿಗರನ್ನು ಗುರಿಯಾಗಿಸಿ ನಡೆಸಿರುವ ದಾಳಿ ಹೇಡಿತನದ ದುಷ್ಕೃತ್ಯವಾಗಿದೆ. ಕೇಂದ್ರ ಸರ್ಕಾರ ವಿಳಂಬ ಮಾಡದೆ ದುಷ್ಟರ ವಿರುದ್ಧ ಸಮರ ಸಾರಬೇಕು ಎಂದು ಒತ್ತಾಯಿಸಿದ್ದಾರೆ. ಉಗ್ರರ ಗುಂಡಿಗೆ ಬಲಿಯಾದವರ ಆತ್ಮಕ್ಕೆ ಶಾಂತಿ ಕೋರುತ್ತೇವೆ, ಪ್ರವಾಸಿಗರ ಸಾವಿಗೆ ನ್ಯಾಯ ಸಿಗಬೇಕಾದರೆ ದುಷ್ಕರ್ಮಿಗಳು ನಾಶವಾಗಬೇಕು. ಇದಕ್ಕೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಳ್ಳಬೇಕು. ಭಯೋತ್ಪಾದಕರನ್ನು ಸದೆಬಡಿಯಲು ರಾತ್ರಿ ಹಗಲೆನ್ನದೆ ಕಾರ್ಯಾಚರಣೆಯಲ್ಲಿ ತೊಡಗಿರುವ ಭಾರತೀಯ ಯೋಧರ ಬಗ್ಗೆ ನಮಗೆ ಹೆಮ್ಮೆ ಇದೆ. ದೇಶದ್ರೋಹಿಗಳ ವಿರುದ್ಧ ಸರ್ಕಾರ ಮತ್ತು ಜನ ಎಚ್ಚೆತ್ತುಕೊಳ್ಳಬೇಕಾಗಿದೆ. ಎಲ್ಲರೂ ಒಗ್ಗಟ್ಟನ್ನು ಪ್ರದರ್ಶಿಸುವ ಮೂಲಕ ದೇಶದ ಭದ್ರತೆಗೆ ಸಹಕರಿಸಬೇಕು ತಿಳಿಸಿದ್ದಾರೆ. ದೇಶದಲ್ಲಿ ನಿಯಮಬಾಹಿರವಾಗಿ ನೆಲೆಸಿರುವ ವಿದೇಶಿಯರ ಬಗ್ಗೆ ನಿಗಾ ವಹಿಸಬೇಕು ಮತ್ತು ರಾಜ್ಯದಲ್ಲೂ ಭದ್ರತೆಯನ್ನು ಹೆಚ್ಚಿಸಬೇಕು ಎಂದು ಎಂ.ಯು.ಹನೀಫ್ ಆಗ್ರಹಿಸಿದ್ದಾರೆ.










