ಮಡಿಕೇರಿ NEWS DESK ಡಿ.22 : ತಾಲ್ಲೂಕು ಕೇಂದ್ರವಾದ ಕುಶಾಲನಗರ ಪಟ್ಟಣದ ಪಿ.ಎಂ.ಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಭಾರತೀಯ ಸ್ಕೌಟ್ಸ್, ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆ, ಕುಶಾಲನಗರ ಸ್ಥಳೀಯ ಸಂಸ್ಥೆಯ ವತಿಯಿಂದ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಎರಡು ದಿನಗಳ ಕಾಲ ಏರ್ಪಡಿಸಿದ್ದ ಜಿಲ್ಲಾಮಟ್ಟದ ಸ್ಕೌಟ್ಸ್, ಗೈಡ್ಸ್ ಮಕ್ಕಳ ಮೇಳ( Rally ) : 2024 ದ ಅಂಗವಾಗಿ ಭಾನುವಾರ ( ಡಿ.22 ರಂದು ) ಸರ್ವಧರ್ಮ ಪ್ರಾರ್ಥನೆ ನೆರವೇರಿಸಲಾಯಿತು. ಸರ್ವಧರ್ಮ ಪ್ರಾರ್ಥನೆಗೆ ಚಾಲನೆ ನೀಡಿದ ಸ್ಕೌಟ್ಸ್, ಗೈಡ್ಸ್ ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸರ್ವಧರ್ಮಗಳ ಬಗ್ಗೆ ಹೆಚ್ಚಿನ ಜ್ಞಾನ ಬೆಳೆಸುವ ಮೂಲಕ ಅವರಲ್ಲಿ ಪರಸ್ಪರ ಪ್ರೀತಿ- ವಿಶ್ವಾಸ ಹಾಗೂ ಸೌಹಾರ್ದತೆ ಬೆಳೆಸಲು ಸಹಕಾರಿಯಾಗಿದೆ ಎಂದರು. *ರಾಷ್ಟ್ರಧ್ವಜ , ರಾಷ್ಟ್ರಗೀತೆ ಬಗ್ಗೆ ಮಾಹಿತಿ*: ಮಕ್ಕಳ ರ್‍ಯಾಲಿಯಲ್ಲಿ ಜಿಲ್ಲಾ ಸ್ಕೌಟ್ಸ್ ಆಯುಕ್ತ ಜಿಮ್ಮಿ ಸಿಕ್ವೇರಾ, ಮಕ್ಕಳಿಗೆ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯ ಇತಿಹಾಸ ಮತ್ತು ಮಹತ್ವದ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ರಾಷ್ಟ್ರಪ್ರೇಮ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಇದೇ ವಿದ್ಯಾರ್ಥಿಗಳಿಗೆ ಸರ್ವಧರ್ಮ ಆಚರಣೆಯ ಮಹತ್ವ ಕುರಿತು ಮಾಹಿತಿ ನೀಡಲಾಯಿತು. ಸರ್ವಧರ್ಮ ಪ್ರಾರ್ಥನೆಯಲ್ಲಿ ಸ್ಕೌಟ್ಸ್, ಗೈಡ್ಸ್ ನ ಕುಶಾಲನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಡಾ. ಪ್ರವೀಣ್ ದೇವರಗುಂಡ ಸೋಮಪ್ಪ, ಜಿಲ್ಲಾ ಗೈಡ್ಸ್ ಸಹಾಯಕ ಆಯುಕ್ತೆ ಸಿ.ಎಂ.ಸುಲೋಚನಾ, ಜಿಲ್ಲಾ ತರಬೇತಿ ಆಯುಕ್ತರಾದ ಕೆ.ಯು.ರಂಜಿತ್, ಎಚ್.ಮೈಥಿಲಿರಾವ್, ಫ್ಲಾಕ್ ಲೀಡರ್ ಬಿ.ಕೆ.ಲಲಿತಾ , ಗೈಡ್ ಕ್ಯಾಪ್ಟನ್ ಬಿ.ಬಿ.ಜಾಜಿ,ಬುಲ್ ಬುಲ್ ಫ್ಲಾಕ್ ಲೀಡರ್ ಎಂ. ಡೈಸಿ ಫ್ರಾನ್ಸಿಸ್ , ಸಂಸ್ಥೆಯ ರಾಜ್ಯ ಪ್ರತಿನಿಧಿ ಬಿ.ಎಸ್.ಕಾವೇರಿ, ಜಿಲ್ಲಾ ಸಂಘಟಕಿ ಯು.ಸಿ.ದಮಯಂತಿ, ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ಜಿಲ್ಲಾ ಮಟ್ಟ ಹಾಗೂ ಸ್ಥಳೀಯ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು. ಇದಕ್ಕೂ ಮೊದಲು ಮಕ್ಕಳಿಗೆ ವ್ಯಾಯಾಮ ( BP 6 ) ನಡೆಸಲಾಯಿತು.