ಮಡಿಕೇರಿ ಡಿ.23 NEWS DESK : ದುಶ್ಚಟ ದೂರ ಮಾಡಲು ಕ್ರೀಡೆ ಸಾಧನ ಎಂದು ಮಡಿಕೇರಿ ಉಪವಿಭಾಗ ಪೊಲೀಸ್ ಅಧೀಕ್ಷಕ ಮಹೇಶ್ ಕುಮಾರ್ ಹೇಳಿದರು. 5ನೇ ಆವೃತ್ತಿಯ ಇಬ್ನಿವಳವಾಡಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ನಗರದ ಜ. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಚಾಲನೆ ನೀಡಿ ಮಾತನಾಡಿದರು. ಕ್ರೀಡೆ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಲು ಪೂರಕವಾಗಿದೆ. ಇತ್ತೀಚಿನ ದಿನಗಳಲ್ಲಿ ಯುವಜನತೆ ತಪ್ಪು ದಾರಿ ಹಿಡಿಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ದುಶ್ಚಟಗಳಿಂದ ವೈಯಕ್ತಿಕ ಆರೋಗ್ಯದೊಂದಿಗೆ ಸಮಾಜದ ಸ್ವಾಸ್ಥ್ಯವೂ ಹದಗೆಡುತ್ತದೆ. ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ದುಶ್ಚಟದಿಂದ ದೂರ ಉಳಿಯಲು ಸಾಧ್ಯ ಎಂದು ಪ್ರತಿಪಾದಿಸಿದರು. ಕ್ರೀಡಾಪಟುಗಳಲ್ಲಿ ಕ್ರೀಡಾ ಸ್ಫೂರ್ತಿ ಇರಬೇಕು. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕಿ ಎಂದು ಹೇಳಿದರು. ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಮಾತನಾಡಿ, ಕೊಡಗು ಕ್ರೀಡೆ ಹಾಗೂ ಸೈನ್ಯ ಕ್ಷೇತ್ರಕ್ಕೆ ಹೆಸರುವಾಸಿಯಾಗಿದೆ. ಆದರೆ, ರಾಷ್ಟ್ರೀಯ ತಂಡಗಳಿಗೆ ಕೊಡಗಿನಿಂದ ಆಯ್ಕೆಯಾಗುವರ ಸಂಖ್ಯೆ ಕ್ಷೀಣಿಸುತ್ತಿರುವುದು ವಿಷಾದನೀಯ. ಸಾಧನೆ ಮಾಡುವ ನಿಟ್ಟಿನಲ್ಲಿ ಜಿಲ್ಲೆಯ ಕ್ರೀಡಾಪಟುಗಳು ಸಾಗಬೇಕು ಎಂದು ಕರೆ ನೀಡಿದರು. ನಗರಸಭೆ ಮಾಜಿ ಸದಸ್ಯೆ ವೀಣಾಕ್ಷಿ ಮಾತನಾಡಿ, ಶಿಸ್ತು, ಸಂಯಮ ಕ್ರೀಡಾಪಟುಗಳಿಗೆ ಮುಖ್ಯ ಎಂದು ಹೇಳಿದರು. ಮಕ್ಕಂದೂರು ಗ್ರಾ.ಪಂ. ಅಧ್ಯಕ್ಷ ರಮೇಶ್ ಪೂಜಾರಿ ಮಾತನಾಡಿ, ಮಾನವನಿಗೆ ಆತ್ಮ , ದೇಹ ಹಾಗೂ ಜ್ಞಾನ ಇರಬೇಕು. ಕ್ರೀಡೆ ದೇಹಬಲ ಹೆಚ್ಚಿಸುವುದರೊಂದಿಗೆ ಆತ್ಮಬಲ ವೃದ್ಧಿಯಾಗಿ ಜ್ಞಾನ ಪಡೆಯಲು ಸಾಧ್ಯ ಎಂದು ಅಭಿಪ್ರಾಯಿಸಿದರು. ಮಾಜಿ ಸೈನಿಕ ಸಂಘದ ಕಾರ್ಯದರ್ಶಿ ಪ್ರಭಾಕರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಬ್ನಿವಳವಾಡಿ ಪ್ರೀಮಿಯರ್ ಲೀಗ್ ಅಧ್ಯಕ್ಷ ಮಾಲೇರ ವಿಜು ಕಾರ್ಯಪ್ಪ, ಕೆಸಿಎಲ್ ಅಧ್ಯಕ್ಷ ಲೋಕೇಶ್, ಮಾಜಿ ಸೈನಿಕ ಲೋಕೇಶ್ ಹಾಜರಿದ್ದರು.
ಪ್ರದರ್ಶನ ಪಂದ್ಯ :: ಪತ್ರಕರ್ತ ತಂಡಕ್ಕೆ ಗೆಲುವು ಪಂದ್ಯಾಟದ ಅಂಗವಾಗಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಡಿಕೇರಿ ತಂಡ ಹಾಗೂ ಕ್ರಿಕೆಟ್ ಆಯೋಜಕರ ತಂಡದ ನಡುವೆ ಪ್ರದರ್ಶನ ಪಂದ್ಯ ನಡೆಯಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಯೋಜಕ ತಂಡ ನಿಗದಿತ 5 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 33 ರನ್ ಗಳಿಸಿತು. 34ರನ್ ಗಳ ಗುರಿ ಬೆನ್ನತ್ತಿದ ಎದುರಾಳಿ ಕಾರ್ಯನಿರತ ಪತ್ರಕರ್ತರ ಸಂಘ ತಂಡ 3.3 ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ಭರ್ಜರಿ ಗೆಲುವು ದಾಖಲಿಸಿತು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪರ ಆದರ್ಶ್ ಅದ್ಕಲೇಗಾರ್ 3 ಸಿಕ್ಸ್, 1 ಬೌಂಡರಿ ಸಹಿತ 25 ರನ್ ಪೇರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ನಾಯಕ ಮಂಜು ಸುವರ್ಣ ಒಂದು ಬೌಂಡರಿ ಸಹಿತ ಒಟ್ಟು 6 ರನ್ ದಾಖಲಿಸಿ ಗೆಲುವಿಗೆ ನೆರವಾದರು.ಬೌಲಿಂಗ್ ನಲ್ಲಿ ಆದರ್ಶ್ ಅದ್ಕಲೇಗಾರ್ 3, ಮಂಜು, ನವೀನ್ ಡಿಸೋಜ, ಲೋಕೇಶ್ ಕಾಟಗೇರಿ ತಲಾ 2 ವಿಕೆಟ್ ಕಬಳಿಸಿದರು.