ಮಡಿಕೇರಿ ಡಿ.23 NEWS DESK : ತಿತಿಮತಿ ಸಮೀಪದ ಭದ್ರಗೋಳದಲ್ಲಿ ಅಪಘಾತದಲ್ಲಿ ಸಾವನ್ನಪ್ಪಿದ ಹರೀಶ್ ಮತ್ತು ಸನತ್ ಅವರ ಮನೆಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಕುಟುಂಬಕ್ಕೆ ಆಧಾರವಾಗಿದ್ದ ಹರೀಶ್ ಮತ್ತು ಸನತ್ ಸಾವನ್ನಪ್ಪಿದ ವಿಚಾರ ತಿಳಿದ ಶಾಸಕರು, ಕುಟುಂಬಸ್ಥರಿಗೆ ರೂ 25,000 ನಗದು ನೀಡಿ ವಾಹನದ ಮಾಲೀಕ ಮತ್ತು ಚಾಲಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಮೃತ ಹರೀಶ್ ಅವರ ಪತ್ನಿ ಜೀವಿತ ಅವರಿಗೆ ಉದ್ಯೋಗ ನೀಡುವಂತೆ ಕುಟುಂಬಸ್ಥರು ಮನವಿ ಮಾಡಿದರು. ಈ ಸಂದರ್ಭ ಮೃತ ಸನತ್ ಮತ್ತು ಹರೀಶ್ ಅವರ ತಂದೆ ನಾರಾಯಣ್, ತಾಯಿ ಶಾರದ, ಹರೀಶ್ ಪತ್ನಿ ಜೀವಿತ ಸೇರಿದಂತೆ ಕುಟುಂಬಸ್ಥರಿದ್ದರು.