ವಿರಾಜಪೇಟೆ ಡಿ.23 NEWS DESK : ಶಿಕ್ಷಕರ ಮಾರ್ಗದರ್ಶನ ವಿದ್ಯಾರ್ಥಿಗಳಿಗೆ ಅತೀ ಮುಖ್ಯವಾಗಿದ್ದು, ಶಿಕ್ಷಕರ ಅಮೂಲ್ಯ ಮಾರ್ಗದರ್ಶನವನ್ನು ಗಂಭೀರವಾಗಿ ಪರಿಗಣಿಸಿ ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಬೇಕು ಎಂದು ಮೂರ್ನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ.ಚೌರಿರ ಜಗತ್ ತಿಮ್ಮಯ್ಯ ಅಭಿಪ್ರಾಯಪಟ್ಟರು. ಮೂರ್ನಾಡು ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ಯಶಸ್ಸಿಗೆ ಶಿಕ್ಷಕರ ಮಾರ್ಗದರ್ಶನ ಅತೀ ಮುಖ್ಯವಾಗಿದ್ದು, ವಿದ್ಯಾರ್ಥಿ ಜೀವನ ಮಾತ್ರವಲ್ಲದೆ ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿಯಾಗಿದೆ ಎಂದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕಾಂತುರು-ಮೂರ್ನಾಡು ಗ್ರಾ.ಪಂ ಅಧ್ಯಕ್ಷ ಬಿ.ಎಸ್.ಕುಶನ್ ರೈ, ಜೀವನಕ್ಕೆ ಬೇಕಾದ ಉತ್ತಮ ಮೌಲ್ಯ ಹಾಗೂ ಸಂಸ್ಕಾರಕ್ಕೆ ಅಡಿಪಾಯವಾಗುವುದೇ ಪ್ರೌಢ ಶಿಕ್ಷಣ. ಇಲ್ಲಿ ಕಲಿತ ಸತ್ ಚಿಂತನೆಗಳು ಖಂಡಿತವಾಗಿಯೂ ಮುಂದೊಂದು ದಿವಸ ಉತ್ತಮ ಫಲವನ್ನು ನೀಡುತ್ತದೆ ಎಂದು ಹೇಳಿದರು. ಈ ಸಂದರ್ಭ ಕಾಂತುರು-ಮೂರ್ನಾಡು ಗ್ರಾ.ಪಂ ಉಪಾಧ್ಯಕ್ಷೆ ಬಿ.ಎಸ್.ರೇಖಾ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಎ.ಎನ್.ರಶ್ಮಿ , ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಪಿ.ಎಂ.ವೇಣು ಅಪ್ಪಣ್ಣ, ಖಜಾಂಚಿ ವಿ.ಎ.ಯತೀಶ್, ನಿರ್ದೇಶಕರಾದ ಈ.ಯು.ಸೋಮಣ್ಣ, ಎಂ.ಕೆ.ಚಂಗಪ್ಪ, ಪಿ.ಎ.ದೇವಯ್ಯ, ಪಿ.ಡಿ.ಹರೀಶ್, ಕೆ.ಜಿ.ರಾಮಮೂರ್ತಿ ಹಾಗೂ ದಾನಿಗಳಾದ ಬಾಚೆಟ್ಟಿರ ಕಮಲು ಮುದ್ದಯ್ಯ ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶಿಕ್ಷಕರು, ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.