ಮಡಿಕೇರಿ ಡಿ.25 NEWS DESK : ರಾಜ್ಯ ಕಾಂಗ್ರೆಸ್ ಸರಕಾರ ಸರ್ವಾಧಿಕಾರದ ಧೋರಣೆ ಅನುಸರಿಸುತ್ತಿದ್ದು, ಇದಕ್ಕೆ ತಕ್ಕ ಉತ್ತರ ನೀಡುವ ಅಗತ್ಯವಿದೆ ಎಂದು ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ತಿಳಿಸಿದ್ದಾರೆ. ಗೋಣಿಕೊಪ್ಪಲು ದುರ್ಗಾಬೋಜಿ ಸಭಾಂಗಣದಲ್ಲಿ ನಡೆದ ವಿರಾಜಪೇಟೆ ತಾಲ್ಲೂಕು ಬಿಜೆಪಿ ಮಂಡಲದ ಸಂಘಟನಾ ಪರ್ವ ಮತ್ತು ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಕರ್ನಾಟಕ ದೇಶದಲ್ಲಿಯೇ 2ನೇ ಸ್ಥಾನದಲ್ಲಿದೆ. ಸಂಘಟನಾತ್ಮಕವಾಗಿ ಬಲಹೊಂದುವ ಮೂಲಕ ಬಿಜೆಪಿಗೆ ಮತ್ತೆ ಶಕ್ತಿ ತುಂಬುವ ಕಾರ್ಯವನ್ನು ಪ್ರತಿಯೊಬ್ಬ ಕಾರ್ಯಕರ್ತರು ಮಾಡಬೇಕೆಂದು ಕರೆ ನೀಡಿದರು. ಕಾಂಗ್ರೆಸ್ ಸರಕಾರ ನಡೆಸುತ್ತಿರುವ ದಾದಾಗಿರಿಯ ಆಡಳಿತಕ್ಕೆ ತಕ್ಕ ಉತ್ತರ ನೀಡಬೇಕಾಗಿದೆ. ದೇಶಪ್ರೇಮ, ಧರ್ಮ ರಕ್ಷಣೆ, ಸಂಸ್ಕೃತಿ, ಆಚಾರ, ವಿಚಾರಗಳನ್ನು ಮೈಗೂಡಿಸಿಕೊಂಡಿರುವ ಬಿಜೆಪಿ ಕಾರ್ಯಕರ್ತರ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಕಾರ್ಯ ಕಾಂಗ್ರೆಸ್ ಪಕ್ಷದಿಂದ ಸಾಧ್ಯವಿಲ್ಲವೆಂದರು. ವಿರಾಜಪೇಟೆ ಬಿಜೆಪಿ ಮಂಡಲ ಅಧ್ಯಕ್ಷ ಸುವಿನ್ ಗಣಪತಿ ಮಾತನಾಡಿ ಕೊಡಗಿನಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಬಿಜೆಪಿ ತನ್ನ ವರ್ಚಸ್ಸನ್ನು ಕಳೆದುಕೊಂಡಿಲ್ಲ. ಮುಂದಿನ ದಿನಗಳಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ತಿಳಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತ ನಡೆಸುತ್ತಿದ್ದರೂ ಬಿ.ಶೆಟ್ಟಿಗೇರಿ ಮತ್ತು ಬಾಳೆಲೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಕುಟ್ಟ ಮತ್ತು ಟಿ.ಶೆಟ್ಟಿಗೇರಿ ಗ್ರಾ.ಪಂ ಉಪಚುನಾವಣೆಯಲ್ಲಿ ಕೂಡ ಬಿಜೆಪಿ ಬೆಂಬಲಿತರೇ ಗೆದ್ದಿದ್ದಾರೆ. ಈ ಬೆಳವಣಿಗೆ ಬಿಜೆಪಿ ಪಕ್ಷದ ಸಂಘಟನೆಗೆ ಸಾಕ್ಷಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ರಾಜ್ಯ ಶಿಸ್ತು ಸಮಿತಿ ಸದಸ್ಯೆ ಪಟ್ಟಡ ರೀನಾ ಪ್ರಕಾಶ್ ಮಾತನಾಡಿದರು. ತಾಲ್ಲೂಕು ಮಂಡಲ ಬೂತ್ ಅಧ್ಯಕ್ಷರುಗಳು, ಪೊನ್ನಂಪೇಟೆ ಮಹಿಳಾ ಸಮಾಜದ ಚುನಾವಣೆಯಲ್ಲಿ, ಬಾಳಲೆ ಮತ್ತು ಬಿ.ಶೆಟ್ಟಿಗೇರಿ ಫ್ಯಾಕ್ಸ್ ಚುನಾವಣೆಯಲ್ಲಿ ಗೆಲುವು ಸಾಧಿಸಿದವರು ಹಾಗೂ ಕುಟ್ಟ ಪಂಚಾಯಿತಿ ಉಪಚುನಾವಣೆಯಲ್ಲಿ ಜಯ ಸಾಧಿಸಿದ ರಾಜ ಮತ್ತು ಟಿ.ಶೆಟ್ಟಿಗೇರಿ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಗೌರ ಅವರನ್ನು ಪಕ್ಷದ ವತಿಯಿಂದ ಸನ್ಮಾನಿಸಲಾಯಿತು. ನಿಕಟಪೂರ್ವ ಅಧ್ಯಕ್ಷ ರಾಬಿನ್ ದೇವಯ್ಯ, ಪ್ರಮುಖರಾದ ಕುಂಞಂಗಡ ಅರುಣ್ ಭೀಮಯ್ಯ, ಪಟ್ರಪಂಡ ರಘು ನಾಣಯ್ಯ, ಕನ್ನಂಡ ಸಂಪತ್, ಬಿ.ಕೆ.ಲೋಕೇಶ, ಚಂದ್ರ, ಗುಮ್ಮಟ್ಟೀರ ಕಿಲಾನ್ ಗಣಪತಿ, ಕುಟ್ಟಂಡ ಅಜಿತ್ ಕರುಂಬಯ್ಯ, ಮುದ್ದಿಯಡ ಮಂಜು ಸೇರಿದಂತೆ ಬೂತ್ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.