ಮಡಿಕೇರಿ ಡಿ.26 NEWS DESK : ಸರ್ಕಾರದ ಪ್ರಮುಖ ಗ್ಯಾರಂಟಿಯಲ್ಲಿ ಒಂದಾದ ‘ಯುವನಿಧಿ’ ಯೋಜನೆಯು ಜಾರಿಗೊಂಡು ಡಿಸೆಂಬರ್ 26 ಕ್ಕೆ ಒಂದು ವರ್ಷ ಪೂರ್ಣಗೊಂಡಿದೆ. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಜಾರಿಗೊಳಿಸಲಾಗಿರುವ ಯುವನಿಧಿ ಯೋಜನೆಯು ಯುವಜನತೆಯ ಉಜ್ವಲ ಭವಿಷ್ಯಕ್ಕಾಗಿ ಕರ್ನಾಟಕ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ಪ್ರತಿ ತಿಂಗಳು ನಿರುದ್ಯೋಗಿ ಪದವೀದರರಿಗೆ 3 ಸಾವಿರ ರೂ. ಮತ್ತು ಡಿಪ್ಲೋಮಾ ತೇರ್ಗಡೆಯಾದವರಿಗೆ 1500 ರೂ. ಎರಡು ವರ್ಷಗಳವರೆಗೆ ಭರಿಸಲಾಗುತ್ತದೆ. 2023 ರಲ್ಲಿ ಪದವಿ, ಡಿಪ್ಲೋಮಾ ಉತ್ತೀರ್ಣರಾದ ವಿದ್ಯಾರ್ಥಿಗಳು, ಪದವಿ ಡಿಪ್ಲೋಮಾ ನಂತರ ಕನಿಷ್ಠ 6 ತಿಂಗಳ ವರೆಗೆ ಸರ್ಕಾರಿ/ ಖಾಸಗಿ ಉದ್ಯೋಗ ಹೊಂದಿಲ್ಲದವರು, ಸ್ವಯಂ ಉದ್ಯೋಗ ಹೊಂದಿಲ್ಲದವರು, ಉನ್ನತ ವಿದ್ಯಾಭ್ಯಾಸ ಮುಂದುವರೆಸದೆ ಇರುವವರು, ರಾಜ್ಯದಲ್ಲಿ ವಾಸವಿರುವ ಕನಿಷ್ಠ 6 ವರ್ಷದವರೆಗೆ ಪದವಿ/ ಡಿಪ್ಲೋಮಾ ಉತ್ತೀರ್ಣರಾದವರಿಗೆ ಯುವನಿಧಿ ಸೌಲಭ್ಯ ದೊರೆಯುತ್ತಿದೆ. ಕೊಡಗು ಜಿಲ್ಲೆಯಲ್ಲಿ ಡಿಸೆಂಬರ್, 23 ಕ್ಕೆ ಕೊನೆಗೊಂಡಂತೆ 1262 ಮಂದಿ ಹೆಸರು ನೋಂದಾಯಿಸಿದ್ದಾರೆ. ತಾಲ್ಲೂಕುವಾರು ಗಮನಿಸಿದಾಗ ಮಡಿಕೇರಿ 325, ಕುಶಾಲನಗರ 201, ಪೊನ್ನಂಪೇಟೆ 145, ಸೋಮವಾರಪೇಟೆ 363 ಮತ್ತು ವಿರಾಜಪೇಟೆ ತಾಲ್ಲೂಕಿನಲ್ಲಿ 222 ಮಂದಿ ಯುವನಿಧಿ ಯೋಜನೆಯಡಿ ಹೆಸರು ನೋಂದಾಯಿಸಿದ್ದಾರೆ. 1262 ಮಂದಿಯಲ್ಲಿ 1133 ಮಂದಿಗೆ ಡಿಬಿಟಿ ಮೂಲಕ ಪ್ರತಿ ತಿಂಗಳು ಹಣ ಪಾವತಿ ಆಗುತ್ತಿದೆ. ಯುವನಿಧಿಯ 1133 ಮಂದಿಯಲ್ಲಿ ಸಾಮಾನ್ಯ ವರ್ಗದಲ್ಲಿ 947 ಮಂದಿ ಸೌಲಭ್ಯ ಪಡೆಯುತ್ತಿದ್ದು, 418 ಮಂದಿ ಪುರುಷ ಮತ್ತು 529 ಮಂದಿ ಮಹಿಳೆಯರು. 128 ಪರಿಶಿಷ್ಟ ಅಭ್ಯರ್ಥಿಗಳಲ್ಲಿ ಇವರಲ್ಲಿ 44 ಪುರುಷರು, 84 ಮಹಿಳೆಯರು, ಪರಿಶಿಷ್ಟ ಪಂಗಡದಲ್ಲಿ 41 ಮಂದಿ ಇದ್ದು, 15 ಪುರುಷ, 26 ಮಹಿಳೆಯರು ಇದ್ದಾರೆ. ಒಟ್ಟಾರೆ ಪದವಿ ವಿಭಾಗದಲ್ಲಿ 1116 ಮಂದಿ ಯುವನಿಧಿ ಸೌಲಭ್ಯ ಪಡೆಯುತ್ತಿದ್ದಾರೆ. ಹಾಗೆಯೇ ಡಿಪ್ಲೋಮಾ ವಿಭಾಗದಲ್ಲಿ ಸಾಮಾನ್ಯ ವರ್ಗದಲ್ಲಿ 15 ಮಂದಿ ಇದ್ದು, 13 ಪುರುಷ, 02 ಮಹಿಳೆ, ಹಾಗೆಯೇ ಪರಿಶಿಷ್ಟ ಜಾತಿಯಲ್ಲಿ ಒಬ್ಬ ಮಹಿಳೆ, ಪರಿಶಿಷ್ಟ ಪಂಗಡದಲ್ಲಿ ಒಬ್ಬ ಪುರುಷ ಒಟ್ಟು ಡಿಪ್ಲೋಮಾ ವಿಭಾಗದಲ್ಲಿ 17 ಮಂದಿ ಯುವನಿಧಿ ಸೌಲಭ್ಯ ಪಡೆಯುತ್ತಿದ್ದಾರೆ. ಒಟ್ಟಾರೆ 1133 ಮಂದಿ ಯುವನಿಧಿ ಸೌಲಭ್ಯ ಪಡೆಯುತ್ತಿದ್ದಾರೆ. ಯಾವುದೇ ಪದವಿ, ಡಿಪ್ಲೋಮಾ, ಸ್ನಾತಕೋತ್ತರ ಪದವಿ ಉತ್ತೀರ್ಣರಾಗಿ ಸರ್ಕಾರಿ, ಖಾಸಗಿ, ಸ್ವಯಂ ಉದ್ಯೋಗ ಹೊಂದಿಲ್ಲದವರು ಮತ್ತು ಉನ್ನತ ವಿದ್ಯಾಭ್ಯಾಸ ಮುಂದುವರೆಸದೆ ಇರುವ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಳ್ಳಲು ‘ಸೇವಾ ಸಿಂಧು’ ಪೋರ್ಟಲ್ http://sevasindhugs.karnataka.gov.in ಅನ್ನು ಭೇಟಿ ನೀಡಿ ಹಾಗೂ ಉಚಿತವಾಗಿ ಕರ್ನಾಟಕ ಒನ್, ಗ್ರಾಮ ಒನ್ ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳ ಮುಖಾಂತರ ಅರ್ಜಿ ಸಲ್ಲಿಸಬಹುದು. ‘ಸೇವಾ ಸಿಂಧು’ ಪೋರ್ಟಲ್ ಮುಖಪುಟದಲ್ಲಿರುವ ನ್ಯಾಡ್ ಲಿಂಕ್ ಉಪಯೋಗಿಸಿಕೊಂಡು ತಮ್ಮ ದಾಖಲೆಗಳು ಇಂದೀಕರಣವಾಗಿರುವುದನ್ನು ಖಚಿತಪಡಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ 18005999918 ಗೆ ಕರೆ ಮಾಡಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಸಿ.ಬಿ.ಮಂಜುನಾಥ್ ತಿಳಿಸಿದ್ದಾರೆ.