ಮಡಿಕೇರಿ ಡಿ.30 NEWS DESK : ಕ್ರೈಸ್ತ ಧರ್ಮ ಹಾಗೂ ಏಸು ಕ್ರಿಸ್ತರ ಕುರಿತು ಅವಹೇಳನ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ನಗರದ ಸಂತ ಮೈಕಲರ ಚರ್ಚ್ ಎದುರು ಜಮಾಯಿಸಿದ ಅಸೋಸಿಯೇಷನ್ ಪ್ರಮುಖರು ಹಾಗೂ ಪದಾಧಿಕಾರಿಗಳು, ದಿವ್ಯ ಬಲಿ ಪೂಜೆ ಮೂಲಕ ಶಾಂತಿಯುತ ಪ್ರತಿಭಟನೆ ನಡೆಸಿದರು. ಈ ಸಂದರ್ಭ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಮಡಿಕೇರಿ ತಾಲ್ಲೂಕು ಘಟಕದ ಉಪಾಧ್ಯಕ್ಷ ಮೈಕಲ್ ವೇಗಸ್ ಮಾತನಾಡಿ, ಕ್ರೈಸ್ತರ ಪವಿತ್ರ ಹಬ್ಬವಾದ ಕ್ರಿಸ್ಮಸ್ ದಿನದಂದು ಸಾಮಾಜಿಕ ಜಾಲತಾಣದಲ್ಲಿ ಕೆಲ ಕಿಡಿಗೇಡಿಗಳು ಕ್ರೈಸ್ತ ಧರ್ಮ ಹಾಗೂ ಏಸು ಕ್ರಿಸ್ತರ ಕುರಿತು ಅವಹೇಳನ ಪದಗಳನ್ನು ಬಳಸಿ ನಿಂದನೆ ಮಾಡಿ ಸಂದೇಶ ಹರಿಬಿಟ್ಟಿದ್ದಾರೆ. ಸೌಹರ್ದತೆಯಲ್ಲಿರುವ ಕೊಡಗು ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸುವ ಕೆಲಸಕ್ಕೆ ಕೈಹಾಕುತ್ತಿರುವುದು ವಿಷಾದನೀಯ ಎಂದರು. ಈಗಾಗಲೇ ಐದು ತಾಲ್ಲೂಕುಗಳಲ್ಲಿಯೂ ಪೊಲೀಸ್ ದೂರು ನೀಡಿ ಬಂಧನಕ್ಕೆ ಆಗ್ರಹಿಸಲಾಗಿದ್ದು, ಶಾಂತಿಯನ್ನು ಸಾರುವ ಕ್ರೈಸ್ತ ಸಮುದಾಯಕ್ಕೆ ಕಾನೂನು ಮೇಲೆ ವಿಶ್ವಾಸವಿದೆ ಎಂದು ಹೇಳಿದರು. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಸಂಘಟಿತರಾಗಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಅಸೋಸಿಯೇಷನ್ ಜಿಲ್ಲಾ ಉಪಾಧ್ಯಕ್ಷ ಮೈಕಲ್ ಮಾರ್ಷಲ್, ಮಡಿಕೇರಿ ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಪಿಯೂಷ್ ಪೆರೇರ, ತಾಲ್ಲೂಕು ಕಾರ್ಯದರ್ಶಿ ವಿಲ್ಫ್ರೆಂಡ್ ಕೊರೇರ, ಖಜಾಂಚಿ ಶರತ್ ಜೋಸೆಫ್, ಯುವ ಘಟಕದ ತಾಲ್ಲೂಕು ಉಪಾಧ್ಯಕ್ಷ ಅಲಿಸ್ಟರ್ ಜಾಕ್, ದಿವ್ಯಜ್ಯೋತಿ ಸಂಘದ ನಿರ್ದೇಶಕ ಕೆ.ಜಿ.ಪೀಟರ್ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.