ಮಡಿಕೇರಿ NEWS DESK ಡಿ.30 : ಕೊಡಗು ಜಿಲ್ಲಾಡಳಿತ ನಡೆಸಿದ ಶಾಂತಿ ಸಭೆಯ ನಂತರ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು, ಕಟ್ಟೆಮಾಡು ಶ್ರೀ ಮಹಾ ಮೃತ್ಯುಂಜಯ ಸ್ವಾಮಿ ದೇವಾಲಯ ಆಡಳಿತ ಮಂಡಳಿಯ ಕೋರಿಕೆಯಂತೆ ಜಿಲ್ಲಾಡಳಿತ ಒಂದು ವಾರದ ಕಾಲಾವಕಾಶ ನೀಡಿದೆ. ನಂತರ ನಡೆಯುವ ಸಭೆಯಲ್ಲಿ ಒಮ್ಮತದ ನಿರ್ಧಾರವಾದರೆ ಸ್ವಾಗತಾರ್ಹ. ತಪ್ಪಿದಲ್ಲಿ ಪ್ರತಿಭಟನೆ ನಡೆಸುವುದು ಅಥವಾ ದೇವಾಲಯಕ್ಕೆ ನುಗ್ಗಲು ಮುಂದಾಗುವುದಕ್ಕೆ ಪೊಲೀಸ್ ಇಲಾಖೆ ಅವಕಾಶ ನಿಡುವುದಿಲ್ಲ. ಉದ್ದೇಶ ಪೂರ್ವಕವಾಗಿ ಶಾಂತಿಭಂಗ ಮಾಡಲು ಯತ್ನಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದರು. ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರ ಒಪ್ಪಿಗೆಯಾಗದಿದ್ದಲ್ಲಿ ನ್ಯಾಯಾಲಯಕ್ಕೆ ಹೋಗಲು ಅವಕಾಶವಿದೆ, ಅಲ್ಲಿ ನ್ಯಾಯವನ್ನು ಪಡೆಯಬಹುದಾಗಿದೆ. ಅದನ್ನು ಬಿಟ್ಟು ಶಾಂತಿಭಂಗ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಸೂಕ್ತ ನಿರ್ಧಾರ ಕೈಗೊಳ್ಳಲು ಒಂದು ವಾರದ ಕಾಲಾವಕಾಶವನ್ನು ಜಿಲ್ಲಾಡಳಿತ ನೀಡಿರುವುದರಿಂದ ಮತ್ತು ಸಭೆಯಲ್ಲಿ ಇದ್ದವರು ಇದಕ್ಕೆ ಸಮ್ಮತಿ ಸೂಚಿಸಿರುವುದರಿಂದ ಪ್ರತಿಭಟನೆಗಳನ್ನು ವಾಪಾಸು ಪಡೆಯಲಿದ್ದಾರೆ ಎನ್ನುವ ವಿಶ್ವಾಸವಿದೆಯೆಂದು ಎಸ್‌ಪಿ ತಿಳಿಸಿದರು.