ಮಡಿಕೇರಿ ಜ.1 NEWS DESK : ಸಹಕಾರ ಸಂಘಗಳು ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ಜ್ಞಾನ ಅತಿ ಮುಖ್ಯ ಎಂದು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಹಾಗೂ ಶ್ರೇಷ್ಠ ಸಹಕಾರಿ ಪ್ರಶಸ್ತಿ ಪುರಸ್ಕೃತ ಎನ್.ಎ.ರವಿ ಬಸಪ್ಪ ಹೇಳಿದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಂಯುಕ್ತಾಶ್ರಯದಲ್ಲಿ ನಗರದ ಪಂದ್ಯಂಡ ಐ.ಬೆಳ್ಯಪ್ಪ ಸ್ಮಾರಕ ಸಹಕಾರ ಭವನದ ಸಭಾಂಗಣದಲ್ಲಿ ನಡೆದಜಿಲ್ಲೆಯ ಪಟ್ಟಣ ಸಹಕಾರ ಬ್ಯಾಂಕ್, ಪತ್ತಿನ ಸಹಕಾರ ಸಂಘ, ಗ್ರಾಹಕರ ಮತ್ತು ವಿವಿಧೊದ್ಧೇಶ ಸಹಕಾರ ಸಂಘ, ಜೇನು ಮಾರಾಟ ಸಹಕಾರ ಸಂಘ ಹಾಗೂ ಇತರೆ ಸಹಕಾರ ಸಂಘಗಳ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಮತ್ತು ಕಾರ್ಯನಿರ್ವಾಹಕರಿಗೆ ವಿವಿಧ ರೀತಿಯ ತೆರಿಗೆಗಳು ಹಾಗೂ ಡಿಜಿಟಲ್ ಬ್ಯಾಂಕಿಂಗ್, ಸೈಬರ್ ಭದ್ರತೆ ಮತ್ತು ವ್ಯಾವಹಾರಿಕ ಸಂವಹನೆ ಕುರಿತು ಶಿಕ್ಷಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆಡಳಿತ ಮಂಡಳಿ ಸದಸ್ಯರು ಕಾಯ್ದೆ, ಕಾನೂನು, ತೆರಿಗೆ, ಲೆಕ್ಕಪರಿಶೋಧನೆ ಇತ್ಯಾದಿ ಮಾಹಿತಿ ಇಲ್ಲದೆ ಆಡಳಿತ ನಡೆಸುವುದರಿಂದ ಸಂಘವು ನಷ್ಟವನ್ನು ಅನುಭವಿಸುತ್ತದೆ. ಅಧ್ಯಕ್ಷರು, ಕಾರ್ಯನಿರ್ವಹಣಾಧಿಕಾರಿಯು ಅಲ್ಲದೆ ಆಯ್ಕೆಯಾಗಿ ಬಂದ ಪದಾಧಿಕಾರಿಗಳಿಗೆ ಮನವರಿಕೆ ಮಾಡಬೇಕಾದರೆ ಜ್ಞಾನ ಪಡೆಯುವುದು ಅತಿ ಮುಖ್ಯ. ಎಷ್ಟೇ ತಿಳುವಳಿಕೆ ಹೊಂದಿದರೂ ಬದಲಾವಣೆ ಜಗದ ನಿಯಮ ಎಂಬಂತೆ ಹೊಸ ವಿಷಯವನ್ನು ಅಳವಡಿಸಿಕೊಂಡಲ್ಲಿ ಮಾತ್ರ ಸಂಘದ ಸಮರ್ಪಕ ನಿರ್ವಹಣೆ ಸಾಧ್ಯವಾಗುತ್ತದೆ. ಭಾಗವಹಿಸಿದ ಪ್ರತಿನಿಧಿಗಳೆಲ್ಲರಿಗೂ ಇಗ್ಗುತ್ತಪ್ಪ ಕಾವೇರಮ್ಮೆ ಜ್ಞಾನ ಶಕ್ತಿ ನೀಡಲೆಂದು ಶುಭ ಹಾರೈಸಿದರು. ಸಹಕಾರ ಸಂಘಗಳಿಗೆ ಅನ್ವಯವಾಗುವ ಆದಾಯ ತೆರಿಗೆ ಮತ್ತು ಜಿ.ಎಸ್.ಟಿ. ಕುರಿತು ಸವಿವರವಾದ ಮಾಹಿತಿಯನ್ನು ಸನ್ನದು ಲೆಕ್ಕಿಗರಾದ ರುದ್ರೇಶ್ ಪಟೇಲ್ ಹಾಗೂ ಡಿಜಿಟಲ್ ಬ್ಯಾಂಕಿಂಗ್, ಸೈಬರ್ ಭದ್ರತೆ ಮತ್ತು ವ್ಯವಹಾರಿಕ ಸಂವಹನ ಕುರಿತು ಬ್ಯಾಂಕಿಂಗ್ ವ್ಯಕ್ತಿತ್ವ ವಿಕಸನ ತರಬೇತುದಾರರು ಮತ್ತು ವೃತ್ತಿ ಮಾರ್ಗದರ್ಶಕರಾದ ಆರ್.ಕೆ. ಬಾಲಚಂದ್ರರವರು ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಜಿಲ್ಲಾ ಸಹಕಾರ ಯೂನಿಯನ್‍ನ ಮಾಜಿ ನಿರ್ದೇಶಕರು ಹಾಗೂ ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್‍ನ ನಿರ್ದೇಶಕರಾದ ಕನ್ನಂಡ ಸಂಪತ್‍ರವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಯೂನಿಯನ್‍ನ ವ್ಯವಸ್ಥಾಪಕಿ ಆರ್. ಮಂಜುಳ ಪ್ರಾರ್ಥಿಸಿದರೆ, ಸ್ವಾಗತ, ನಿರೂಪಣೆ ಮತ್ತು ವಂದನಾರ್ಪಣೆಯನ್ನು ಯೂನಿಯನ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ನಡೆಸಿದರು.