ಮಡಿಕೇರಿ ಜ.4 NEWS DESK : ಕಟ್ಟೆಮಾಡು ಶ್ರೀ ಮಹಾ ಮೃತ್ಯುಂಜಯ ದೇವಸ್ಥಾನದ ಬೈಲಾದಲ್ಲಿ ಇರುವ ನಡಾವಳಿಗಳನ್ನೆ ಮುಂದುವರೆಸಿಕೊಂಡು ಹೋಗಬೇಕೆಂದು ಕಟ್ಟೆಮಾಡು ಗ್ರಾಮದ ಮರಾಠಿ ಜನಾಂಗ ಬಾಂಧವರು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ಜಿ.ವನಿತಾ ಅವರು, ಶ್ರೀಮಹಾ ಮೃತ್ಯುಂಜಯ ದೇವಸ್ಥಾನದ ವಾರ್ಷಿಕ ಉತ್ಸವದ ಕೊನೆಯ ದಿನದಂದು ದೇವರು ಜಳಕಕ್ಕೆ ತೆರಳುವ ಹಂತದಲ್ಲಿ ಒಂದು ಜನಾಂಗದವರು, ತಮ್ಮ ಸಾಂಪ್ರದಾಯಿಕ ಉಡುಪು ತೊಟ್ಟುಕೊಂಡು ಬಂದಿದ್ದು, ಇದು ಬೈಲಾದಲ್ಲಿನ ನಿಯಮಗಳಿಗೆ ವಿರುದ್ಧವಾಗಿದೆ ಎಂದರು. ದೇವಸ್ಥಾನದ ಬೈಲಾವನ್ನು ಗ್ರಾಮದ ಎಲ್ಲಾ ಜನಾಂಗ ಬಾಂಧವರ ಸಮ್ಮುಖದಲ್ಲಿಯೆ ರಚಿಸಲಾಗಿದ್ದು, ದೇವಸ್ಥಾನಕ್ಕೆ ಬಿಳಿ ಪಂಚೆ ಮತ್ತು ಶರ್ಟ್ ಧರಿಸಿ ಬರುವಂತೆ ಹಾಗೂ ಮಹಿಳೆಯರು ಸೀರೆ ಮತ್ತು ಚೂಡಿದಾರ ಧರಿಸುವಂತೆ ತೀರ್ಮಾಸಲಾಗಿದೆ. ಹೀಗಿದ್ದೂ ದೇವಸ್ಥಾನದ ಉತ್ಸವದ ಸಂದರ್ಭ ‘ಕೊಡವ ಸಾಂಪ್ರದಾಯಿಕ ಉಡುಪು’ ಧರಿಸಿ ಬಂದವರಿಂದ ಉತ್ಸವಕ್ಕೆ ಅಡ್ಡಿಯುಂಟಾಗಿದೆ. ಇದು ದೇವಸ್ಥಾನವನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳುವ ಪ್ರಯತ್ನವೆಂದು ಆರೋಪಿಸಿದರು. ಸರ್ವ ಗ್ರಾಮಸ್ಥರ ಭಾವನೆಗಳಿಗೆ ಸ್ಪಂದನೆ ನೀಡಿ ದೇವಸ್ಥಾನದ ಬೈಲಾ ನಿಯಮಾವಳಿಯನ್ನು ಮುಂದುವರೆಸಿಕೊಂಡು ಹೋಗಲು ಜಿಲ್ಲಾಡಳಿತ ಅವಕಾಶ ನೀಡಬೇಕೆಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ರುಕ್ಮಿಣಿ ಎಂ.ಎಂ., ಸ್ವಾತಿ ಎಂ.ಯು, ಸಂತೋಷ್ ಕುಮಾರ್ ಎಂ.ಕೆ ಹಾಗೂ ನಿಶಾಂತ್ ಎಂ.ಎಸ್ ಉಪಸ್ಥಿತರಿದ್ದರು.