ಪೊನ್ನಂಪೇಟೆ ಜ.9 NEWS DESK : ಸಮಾಜದ ವಿವಿಧ ಧರ್ಮದವರ ಭಕ್ತಿಯ ರೂಪ ಮತ್ತು ಅದರ ಆಚಾರ-ವಿಚಾರ ಬೇರೆ ಬೇರೆಯಾಗಿರುತ್ತದೆ. ಮನುಷ್ಯರ ಸಾಮಾಜಿಕ ಬದುಕಿಗೆ ಭಕ್ತಿಯ ರೂಪಕ್ಕಿಂತ ಸಾಮರಸ್ಯ ಮುಖ್ಯವಾಗಿದೆ. ಆದ್ದರಿಂದ ಮನುಷ್ಯ ಸ್ನೇಹದ ತಳಹದಿಯಲ್ಲಿ ಸಾಮರಸ್ಯವೇ ಪ್ರತಿಯೊಬ್ಬರ ಮೂಲ ಮಂತ್ರವಾಗಿರಬೇಕು ಎಂದು ಅಂತರಾಷ್ಟ್ರೀಯ ಖ್ಯಾತಿಯ ಧಾರ್ಮಿಕ ಉಪನ್ಯಾಸಕರು ಮತ್ತು ಕೇರಳದ ವಿದ್ವಾಂಸ ಉಸ್ತಾದ್ ಸಿರಾಜುದ್ದೀನ್ ಖಾಸಿಮಿ ಪತ್ತಾನಾಪುರಂ ಕರೆ ನೀಡಿದರು. ಆಧುನಿಕ ಇಸ್ಲಾಮಿಕ್ ವಾಸ್ತುಶಿಲ್ಪ ಶೈಲಿಯಲ್ಲಿ ಪುನರ್ ನಿರ್ಮಾಣಗೊಂಡಿರುವ ಪೊನ್ನಂಪೇಟೆ ಶಾಫಿ ಜುಮಾ ಮಸೀದಿಯ ಲೋಕಾರ್ಪಣೆಯ ಅಂಗವಾಗಿ ಮಸೀದಿಯ ಆವರಣದಲ್ಲಿ ಮೂರು ದಿನಗಳ ಕಾಲ ನಡೆದ ವಿವಿಧ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಸಾಮರಸ್ಯದಿಂದ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ. ಮತಗಳ ಭಿನ್ನತೆಗಿಂತಲೂ ಬಂಧುತ್ವವೇ ಪ್ರಧಾನವಾಗಿದೆ. ನಂಬಿಕೆಯ ಆಧಾರದ ಮೇಲೆ ಜನರನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಮನುಷ್ಯರು ಪರಸ್ಪರ ಬೆರೆಯುವ ಮತ್ತು ಸಾಮಾಜಿಕ ಒಗ್ಗಟ್ಟನ್ನು ಪ್ರದರ್ಶಿಸುವ ಮೂಲಕ ಭಾತೃತ್ವದ ಮಹತ್ವವನ್ನು ಎತ್ತಿ ಹಿಡಿಯುವಂತಾಗಬೇಕು ಎಂದು ಕಿವಿಮಾತು ಹೇಳಿದರು. ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರ ಆಶಯದಂತೆ ನಮ್ಮ ಸಮಾಜವು ವಿವಿಧ ಧರ್ಮ, ಜಾತಿ, ವರ್ಣ, ಭಾಷೆಗಳನ್ನು ಒಳಗೊಂಡ ಸರ್ವ ಜನಾಂಗದ ಶಾಂತಿಯ ತೋಟವಾಗಿರಬೇಕು. ಅದಕ್ಕಿಂತಲೂ ಮುಖ್ಯವಾಗಿ ಇತರ ಧರ್ಮವನ್ನು ಗೌರವಿಸುತ್ತಾ ಅವರವರ ಧರ್ಮವನ್ನು ಪಾಲಿಸುವ ಸ್ವಾತಂತ್ರರಾಗಿರಬೇಕು ಎಂದು ಅಭಿಪ್ರಾಯಪಟ್ಟರಲ್ಲದೆ, ಯಾವುದೇ ಧಾರ್ಮಿಕ ಆರಾಧನಾಲಯಗಳನ್ನು ನಿರ್ಮಿಸಲು ಸಂಬಂಧಿಸಿದವರಿಗೆ ಬದ್ಧತೆ ತೀರ ಅಗತ್ಯ. ಈ ಬದ್ಧತೆಯಿಂದ ಪೊನ್ನಂಪೇಟೆ ಶಾಫಿ ಜುಮಾ ಮಸೀದಿಯನ್ನು ಪುನರ್ ನಿರ್ಮಿಸಿದ ಆಡಳಿತ ಮಂಡಳಿ ಅಭಿನಂದನಾರ್ಹರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ. ಎಂ. ಎ.) ಅಧ್ಯಕ್ಷರಾದ ಡಿ.ಹೆಚ್ ಸೂಫಿ ಹಾಜಿ, ಪೊನ್ನಂಪೇಟೆ ಶಾಫಿ ಜುಮಾ ಮಸೀದಿಯನ್ನು ಪುನರ್ ನಿರ್ಮಿಸಲು ಧರ್ಮ ಭೇದದ ಭಾವವಿಲ್ಲದೇ ಸಹೋದರ ಸಮುದಾಯದವರು ಕೈಜೋಡಿಸಿದ್ದು ಕೊಡಗಿನ ಧಾರ್ಮಿಕ ಸಾಮರಸ್ಯದ ಪರಂಪರೆಗೆ ಬಹುದೊಡ್ಡ ಕೊಡುಗೆಯಾಗಿದೆ. ಮಸೀದಿ ನಿರ್ಮಾಣಕ್ಕೆ ಮುಸ್ಲಿಮರು ಸಹಕಾರ ನೀಡುವುದು ದೊಡ್ಡ ವಿಚಾರವಲ್ಲ. ಈ ಅನ್ಯ ಧರ್ಮೀಯ ಮನುಷ್ಯಸ್ನೇಹಿ ಮನಸ್ಸುಗಳ ಉದಾರತೆ ಮುಂದಿನ ಪೀಳಿಗೆಯೂ ಧಾರ್ಮಿಕ ಸಾಮರಸ್ಯ ಬದುಕಿಗೆ ಒತ್ತು ನೀಡುವ ಮುನ್ಸೂಚನೆಯಾಗಿದೆ. ಎಲ್ಲಾ ಧರ್ಮಗಳ ಆಶಯಗಳನ್ನು ಪರಸ್ಪರ ಅರಿತುಕೊಂಡರೆ ಮಾತ್ರ ಕೋಮು ಸೌಹಾರ್ದತೆ ಮತ್ತಷ್ಟು ಗಟ್ಟಿಗೊಳ್ಳಲು ಸಾಧ್ಯ ಎಂದು ಹೇಳಿದರು. ಇದಕ್ಕೂ ಮೊದಲು ಸಮಾರಂಭವನ್ನು ಪಾಣಕ್ಕಾಡಿನ ಸೈಯದ್ ಮೊಯೀನ್ ಅಲಿ ಶಿಹಾಬ್ ತಂಗಳ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಡಿಸಿಸಿ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೋಳೆರ ದಯಾ ಚಂಗಪ್ಪ, ಗೋಣಿಕೊಪ್ಪಲು ಜುಮಾ ಮಸೀದಿಯ ಖತೀಬರಾದ ಮೊಹಮ್ಮದ್ ಆಲಿ ಫೈಝಿ, ಕೊಡಗು ಜಿಲ್ಲಾ ಎಸ್. ಕೆ.ಎಸ್. ಎಸ್. ಎಫ್. ಪ್ರಧಾನ ಕಾರ್ಯದರ್ಶಿಗಳಾದ ರಫೀಕ್ ಬಾಖವಿ ಮೊದಲಾದವರು ಮಾತನಾಡಿದರು. ಪೊನ್ನಂಪೇಟೆ ಶಾಪಿ ಜುಮಾ ಮಸೀದಿಯ ಆಡಳಿತ ಮಂಡಳಿಯ ಕೋಶಾಧಿಕಾರಿ ಮೊಹಮ್ಮದ್ ಹಾಜಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷರಾದ ಅಣ್ಣಿರ ಹರೀಶ್, ಉಪಾಧ್ಯಕ್ಷರಾದ ಆಲೀರ ಎಂ. ರಶೀದ್, ಕೆಪಿಸಿಸಿ ಸದಸ್ಯರಾದ ಕೆ.ಎ. ಯಾಕೂಬ್, ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾದ ಪಿ.ಎ. ಹನೀಫ್, ಕಾಂಗ್ರೆಸ್ ಮುಖಂಡರಾದ ಶಾಜಿ ಅಚ್ಯುತನ್, ಪೊನ್ನಂಪೇಟೆ ತಾಲೂಕು ಗ್ಯಾರೆಂಟಿ ಪ್ರಾಧಿಕಾರದ ಸದಸ್ಯರಾದ ಸಮದ್, ಎಡಪಾಲ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಕೆ.ಎ. ಬಶೀರ್, ಹಿರಿಯರಾದ ಎರಮು ಹಾಜಿ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಇಸ್ಮಾಯಿಲ್, ಪೊನ್ನಂಪೇಟೆ ತಾಲೂಕು ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾದ ಜುನೈದ್, ಗೋಣಿಕೊಪ್ಪಲಿನ ಉದ್ಯಮಿ ಅಶ್ರಫ್, ಪೊನ್ನಂಪೇಟೆ ಶಾಪಿ ಜುಮಾ ಮಸೀದಿಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಹಮದ್ ಹಾಜಿ, ಉಪಾಧ್ಯಕ್ಷರಾದ ಅಶ್ರಫ್, ಪ್ರಧಾನ ಕಾರ್ಯದರ್ಶಿ ಪಿ.ಎ.ಅಸೀಸ್, ಮಸೀದಿಯ ಖತೀಬರಾದ ಜ್ಹಿಯಾದ್ ದಾರಿಮಿ, ಸದರ್ ಉಸ್ತಾದ್ ಹಮೀದ್ ದಾರಿಮಿ ಸೇರಿದಂತೆ ವಿವಿಧ ಮಸೀದಿಗಳ ಆಡಳಿತ ಮಂಡಳಿಯ ಅಧ್ಯಕ್ಷರು, ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದ ಪ್ರಮುಖರು, ಉದ್ಯಮಿಗಳು ಉಪಸ್ಥಿತರಿದ್ದರು. ಉಸ್ತಾದ್ ಮನಾಫ್ ದಾರಿಮಿ ಕಿರಾಅತ್ ಪಠಿಸಿದರು. ಸಜೀರ್ ಸ್ವಾಗತಿಸಿದರು. ಸಫೀರ್ ಕಾರ್ಯಕ್ರಮ ನಿರೂಪಿಸಿದರೆ, ಎಂ. ಎ. ಅಶ್ರಫ್ ವಂದಿಸಿದರು.