ಮಡಿಕೇರಿ ಜ.9 NEWS DESK : ಒಂದು ಕಾಫಿ ಎಷ್ಟು ಕಿಮೀ ಮೈಲೇಜ್ ಕೊಡುತ್ತದೆ. ನನಗಂತೂ ಹದಿನಾರು ಕಿಮೀ ಮೈಲೇಜ್ ಕೊಟ್ಟಿದೆ. ಅದು ನಡೆದಿದ್ದು ಹೀಗೆ. ಎಂದಿನಂತೆ ಹುಬ್ಬಳ್ಳಿ ಮಡಿಕೇರಿ ಮಾರ್ಗಸೂಚಿಯಲ್ಲಿ ದಿನಾಂಕ ಒಂಬತ್ತನೆಯ ಜನವರಿ ಎರಡು ಸಾಸಿರದ ಇಪ್ಪತ್ತೈದರಂದು ಮುಂಜಾನೆ ಮಂಜು ಕವಿದಿದ್ದ ವೇಳೆಗೆ ನಮ್ಮ ಸಂಸ್ಥೆಯ ನಾವು ದುಡಿಯುವ ಮೂಲ ಘಟಕಕ್ಕೆ ಬಂದಿಳಿದೆನಾ……. ಆಗಲೇ ದವಡೆಯ ದಂತಗಳು ದಗದಗಿಸುವಂತೆ ಕಟಕಟಿಸುತ್ತಿದ್ದವು. ಒಂದೆಡೆ ಮೂತ್ರಕೋಶ ಭರ್ತಿಯಾಗಿ ಇನ್ನೇನು ಚೆಲ್ಲುವ ಹಂತ ತಲುಪಿದೆ. ಆದರೆ ಮನಸ್ಸು ಮಾತ್ರ ಯಾವಾಗ ವಾಹನಕ್ಕೆ ಇಂಧನ ತುಂಬಿಸಿ ಘಟಕದ ಮುಂದಣ ಬಾಗಿಲ ಬಿಳಿ ಇರುವ ಕಾವಲುಪಡೆಯ ದಿನವಹಿಯಲ್ಲಿ ರುಜು ಒಪ್ಪಿಸಿ ತಪ್ಪಿಸಿಕೊಳ್ಳುವೇನೋ ಎಂದು ಚಿಂತನೆ ನಡೆಸಿತ್ತು. ಒಂದು ನಿಮಿಷ ತಡವಾದರೂ ನಮ್ಮ ಮೃತ್ಯುಂಜಯ ದೇವಾಲಯದ ಸರ್ವೀಸು ತಪ್ಪಿ ಹೋಗುವುದೆಂಬ ಆತಂಕ. ಏಕೆಂದರೆ ಬೆಳಗಿನ ನಮ್ಮ ಪಯಣಕ್ಕೆ ಅದೊಂದೇ ಬಸ್ಸು. ಅದು ಆರು ನಲವತ್ತೈದಕ್ಕೆ. ನಮ್ಮ ಊರಿನ ಕಡೆಗೆ ಇನ್ನೊಂದು ಬಸ್ಸು ಇದೆ. ಆದರೆ ಅದು ಏಳು ಗಂಟೆಗೆ. ಅಕ್ಷರಶಃ ಕೊಂಕಣ ಸುತ್ತಿ ಮೈಲಾರಕ್ಕೆ ತಲುಪಲು ತೆಗೆದುಕೊಳ್ಳುವ ಸಮಯ ಒಂದು ಗಂಟೆ ನಲವತ್ತೈದು ನಿಮಿಷಗಳ ಕಾಲ. ಹಾಗಾಗಿ ಬೇಗ ಬೇಗ ಉಡುಪು ಬದಲಾಯಿಸಿ (ಕೆಲವರು ಚಾಲಕರ ಸಮವಸ್ತ್ರದಲ್ಲಿಯೇ ಮನೆಗೆ ಹೊರಟುಬಿಡುತ್ತಾರೆ. ಇದು ನನ್ನಿಂದ ಸಾಧ್ಯವಿಲ್ಲದ ಕೆಲಸ. ಕಾರಣ ಒಂದು ಬಾರಿ ಸಮವಸ್ತ್ರದಲ್ಲಿ ಮನೆಗೆ ಬರುವಾಗ ತೀವ್ರವಾದ ಮುಜುಗರ ಅನುಭವಿಸಿದೆ. ಆನಂತರ ಅನಿವಾರ್ಯವಾಗಿ ಒಂದೆರಡು ಬಾರಿ ಸಮವಸ್ತ್ರದಲ್ಲಿ ಓಡಾಡಿರಬಹುದು. ಆದರೆ ಯಾವತ್ತಿಗೂ ಸಾಧ್ಯವಾದಷ್ಟು ಸಮವಸ್ತ್ರದಲ್ಲಿ ಓಡಾಡುವುದನ್ನು ತಪ್ಪಿಸುವ ಪ್ರಯತ್ನ ಮಾಡುತ್ತೇನೆ.) ಇಂದು ಕೂಡ ಹಾಗೆಯೇ ಸಮವಸ್ತ್ರವನ್ನು ಬದಲಾಯಿಸುತ್ತಿರುವಾಗ ಚಳಿಗೆ ನಡುಗುತ್ತಿರುವ ಕೈ ಬೆರಳುಗಳೇ ಕೆಲಸ ಮಾಡದಂತಾಗಿತ್ತು. ಹಾಗೂ ಹೀಗೂ ಸಮವಸ್ತ್ರ ಬದಲಾಯಿಸಿ ಮುಂಭಾಗದ ಗೇಟಿನ ಕಡೆ ಬಂದಾಗ ನನ್ನ ದಿನವಹಿ ವರದಿಯು ನಮ್ಮ ನಿರ್ವಾಹಕರ ಬಳಿಯಿಂದ ತೆಗೆದುಕೊಳ್ಳಲು ಮರೆತುಬಿಟ್ಟಿರುವುದು ನೆನಪಿಗೆ ಬಂತು. ನನ್ನನ್ನೇ ಶಪಿಸಿಕೊಳ್ಳುತ್ತಾ ಅದನ್ನು ಅವರಿಂದ ಪಡೆದು ಮತ್ತೆ ಸೂಕ್ತಾಧಿಕಾರಿಯವರಿಗೆ ಒಪ್ಪಿಸಿ ಬರುವಷ್ಟರಲ್ಲಿ ನಮ್ಮ ಬಸ್ಸು ಡಿಪೋದಿಂದ ಹೊರಟು ಬಸ್ಸು ನಿಲ್ದಾಣಕ್ಕೆ ಹೋಗಿಯಾಗಿತ್ತು.
ಇನ್ನು ಸದ್ಯ ಅರ್ಧಗಂಟೆ ಯಾವುದೇ ಬಸ್ಸು ಟೋಲ್ಗೇಟ್ ಕಡೆಗೆ ಇಲ್ಲ ಎಂದು ಖಾತ್ರಿ ಆಯಿತು. ಯಾವುದಾದರೂ ಆಟೋ ಸಿಗಬಹುದೇ ಎಂದರೆ ಆಟೋಗಳೇ ಇರಲಿಲ್ಲ. ಇನ್ನೆಂತ ಮಾಡುವುದು ಎಂದು ನಡೆದುಕೊಂಡೆ ಟೋಲ್ ಗೇಟ್ ಕಡೆಗೆ ಹೊರಟೆ. ಆಹ ಹ ಹಾ… ಅದೇನು ಚಳಿ..? ಜೊತೆಗೆ ಅತ್ತ ಇತ್ತ ಸಂಚರಿಸುವ ವಾಹನಗಳ ಗಾಳಿಯಿಂದಲೂ ಚಳಿ ಇನ್ನೂ ಹೆಚ್ಚಾಯಿತು. ವಾಹನಗಳ ಗಾಳಿಗೆ ತರಗೆಲೆಯಂತೆ ಪತರಗುಟ್ಟುತ್ತಾ ಹಾಗೂ ಹೀಗೂ ಟೋಲ್ ಗೇಟ್ ತಲುಪಿದ ಬಳಿಕ ಕಾಫಿ ಕುಡಿಯಲೇಬೇಕೆಂಬ ಉತ್ಕಟ ಸೆಳೆತ ಇನ್ನೂ ಹೆಚ್ಚಾಯ್ತು. ಅಲ್ಲಿಯೇ ಇದ್ದ ವೀಣಾ (ಹೆಸರು ಬದಲಾಯಿಸಲಾಗಿದೆ) ಕ್ಯಾಂಟೀನ್ ಬಳಿ ಹೋಗಿ ಕಾಫಿ ಕುಡಿದು ಬರಲು ಹೇಗಾದರೂ ಐದರಿಂದ ಏಳು ನಿಮಿಷ ಬೇಕು ಏನು ಮಾಡುವುದು ಎಂದು ಆಲೋಚನೆ ಮಾಡಿದೆ. ಆಗ ನೆನಪಿಗೆ ಬಂತು ಬ್ಯಾಗಿನಲ್ಲಿದ್ದ ಥರ್ಮಾಸ್ ಪ್ಲಾಸ್ಕ್ ಅದನ್ನು ಹಿಡಿದು ಅದರಲ್ಲಿ ಕಾಫಿ ಹಾಕಿಸಿಕೊಂಡೆ. ಹಿಂತಿರುಗಿ ನೋಡುವಷ್ಟರಲ್ಲಿ ಬಸ್ಸು ಬಂದೇ ಬಿಟ್ಟಿತು. ಇನ್ನೆಂತ ಮಾಡುವುದು. ಪರಿಚಯದ ಚಾಲಕರೆ ಆದಕಾರಣ ವಾಹನ ನಿಲ್ಲಿಸಿ ನನ್ನನ್ನು ಹತ್ತಿಸಿಕೊಂಡರು. ನನ್ನ ಹಿಂದೆಯೇ ನಾಲ್ಕೈದು ಪ್ರಯಾಣಿಕರು ಬಸ್ಸು ಹತ್ತಿದರು. ತೀವ್ರವಾದ ಚಳಿಗೆ ಕಾಫಿ ಕುಡಿಯಲೇ ಬೇಕು ಎಂಬ ಬಯಕೆಮತ್ತೆ ಮರುಕಳಿಸುತ್ತಿತ್ತು. ಪ್ರಯಾಣಿಕರ ಮುಂದೆ ಪ್ಲಾಸ್ಕಿನಲ್ಲಿ ಕಾಫಿ ಕುಡಿಯಲು ಒಂಥರಾ ಮುಜುಗರ. ಹಾಗೂ ಹೀಗೂ ಬಸ್ಸು ಹೊರಡುವವರೆಗೂ ಸುಮ್ಮನೆ ಇದ್ದೆ. ಬಸ್ಸಿನಲ್ಲಿದ್ದ ಎಲ್ಲರೂ ಅವರವರ ಆಸನದಲ್ಲಿ ಕುಳಿತ ಬಳಿಕ ಥರ್ಮಾಸ್ ಫ್ಲಾಸ್ಕಿನ ಮುಚ್ಚಳ ತೆಗೆದು ಕಾಫಿಗೆ ಬಾಯಿ ಕೊಟ್ಟೆ. ಬಸ್ಸಿನ ಕುಲುಕಾಟಕ್ಕೆ ಕಾಫಿ ತುಳುಕಿ ತುಟಿಯೆಲ್ಲಾ ಸುಟ್ಟಿತು. ತೆನಾಲಿ ರಾಮಕೃಷ್ಣನ ಬೆಕ್ಕಿನ ನೆನಪು ನನಗಾಯಿತು. ಹಾಗೆ ಮುಂದುವರೆದು ಕಾಫಿ ಲೋಟ ಇಲ್ಲದ ಕಾರಣ ಕೈಯಲ್ಲಿ ಫ್ಲಾಶ್ಕ್ ಹಿಡಿದು ಕುಡಿಯುವ ಯತ್ನ ಮಾಡಿದೆ. ಇನ್ನೂ ಒಂದು ಬಾರಿ ತುಟಿ ಸುಟ್ಟಿತು. ಮತ್ತೆಂತ ಮಾಡುವುದು ಕೈಯಲ್ಲಿ ಫ್ಲಾಶ್ಕ್ ಹಿಡಿದು ಕುಳಿತೆ. ಮುಂದೆ ಬಸ್ಸು ಒಂದು ಕಡೆ ನಿಂತು ಒಬ್ಬರು ಹತ್ತಿದರು ಆ ಮಧ್ಯದ ಸಮಯದಲ್ಲಿ ಒಂದು ಗುಟುಕು ಕಾಫಿ ಕುಡಿದೆ. ಅಹಾ ಏನು ಆನಂದ. ಮುಂದೆ ಇನ್ನು ಒಂದು ಕಡೆ ಬಸ್ಸು ನಿಂತಾಗ ಇಬ್ಬರು ಹತ್ತಿದರು. ಅಲ್ಲಿ ಎರಡು ಗುಟುಕ್ ಕಾಫಿ ಕುಡಿದೆ. ಹೀಗೆ ಬಂದು ಬಂದು ಮೂರ್ನಾಡು ತಲುಪಿದಾಗ ಬ್ಸಸು ನಿಂತು ಪ್ರಯಾಣಿಕರನ್ನು ಇಳಿಸಿ ಹತ್ತಿಸಿಕೊಳ್ಳುತ್ತಿದ್ದರು. ಅಲ್ಲಿ ಅರ್ಧ ಕಪ್ ಕಾಫಿ ಖಾಲಿ ಮಾಡಿದೆ ಪುನಃ ಮೂರ್ನಾಡುವಿನ ಅಯ್ಯಪ್ಪ ದೇವಸ್ಥಾನದ ಬಳಿ ಬಸ್ಸು ನಿಂತಿತ್ತು ಉಳಿದ ಕಾಫಿಯನ್ನು ಅಲ್ಲಿ ಮುಗಿಸಿಬಿಟ್ಟೆ. ಅಲ್ಲಿಗೆ ಸುಮಾರು 16 ಕಿಮೀ ಭರ್ತಿಯಾಗಿ ತಲುಪಿದಂತಾಯಿತು. ಕ್ಯಾಂಟೀನ್‌ನಲ್ಲಿಯೇ ಕುಡಿದಿದ್ದರೆ ಐದು ನಿಮಿಷದಲ್ಲಿ ಮುಗಿಯುತ್ತಿದ್ದ ಕಾಫಿ ಥರ್ಮಾಸ್ ಫ್ಲಾಸ್ಕ್‌ನಲ್ಲಿ ಹಾಕಿದ್ದರಿಂದ ಹದಿನಾರು ಕಿಮೀ ಮೈಲೇಜು ಸಿಕ್ಕಿತು. ಅದ್ಯಾಕೋ ನಿಮ್ಮೊಡನೆ ಹಂಚಿಕೊಳ್ಳಬೇಕು ಎನಿಸಿತು.
ಲೇಖನ : ಶಿವೈ (ವೈಲೇಶ.ಪಿ.ಎಸ್.ಕೊಡಗು)