ನವದೆಹಲಿ ಜ.17 NEWS DESK : ಮೈಸೂರಿನಲ್ಲಿ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಲು ವಿಮಾನ ನಿಲ್ದಾಣ ವಿಸ್ತರಣೆ ಅತಿ ಮುಖ್ಯ. ಈ ನಿಟ್ಟಿನಲ್ಲಿ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಪು ರಾಮ್ ಮೋಹನ್ ನಾಯ್ಡು ಅವರಿಗೆ ಮೈಸೂರು-ಕೊಡುಗೆ ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮನವಿ ಸಲ್ಲಿಸಿದ್ದಾರೆ. ನವದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಸಂಸದ ಯದುವೀರ್, ವಿಮಾನ ನಿಲ್ದಾಣ ವಿಸ್ತರಣೆಗೆ ಇರುವ ಸಮಸ್ಯೆಗಳು ಹಾಗೂ ಮುಂದೆ ಆಗಬೇಕಾಗಿರುವ ಕೆಲಸಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಕೇಂದ್ರ ಸಚಿವರ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಯದುವೀರ್, ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ನಂತರ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಸಂಬಂಧನಾಗರಿಕ ವಿಮಾನಯಾನ ಸಚಿವರಾದ ರಾಮ್ ಮೋಹನ್ ನಾಯ್ಡು ವಿಷಯವನ್ನು ಮನವರಿಕೆ ಮಾಡಿಕೊಟ್ಟಿದ್ದೇನೆ. ಭೂಮಿ ಹಸ್ತಾಂತರ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಒತ್ತಡ ಹೇರಿ, ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಭೂಮಿ ಹಸ್ತಾಂತರ ಮಾಡಿಸುವ ಸಂಬಂಧ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಲಾಯಿತು ಎಂದರು. ಭೂಸ್ವಾಧೀನ ಪ್ರಕ್ರಿಯೆಗೆ ಅಡ್ಡಿಯಾಗುತ್ತಿರುವ ವಿವಿಧ ಸಮಸ್ಯೆಗಳನ್ನು ಅವರ ಗಮನಕ್ಕೆ ತಂದಿದ್ದೇನೆ ಮತ್ತು ಅದನ್ನು ಪರಿಹರಿಸಲು ಸೂಚನೆ ನೀಡುವಂತೆಯೂ ಮನವಿ ಮಾಡಲಾಯಿತು ಎಂದು ಸಂಸದ ಯದುವೀರ್ ತಿಳಿಸಿದರು. ಭೂ ಸ್ವಾಧೀನಕ್ಕೆ ವಿಶೇಷ ಜಿಲ್ಲಾಧಿಕಾರಿಗಳ ಒಪ್ಪಿಗೆ ಸಿಕ್ಕಿದೆ. ಭೂ ಮಾಲೀಕರಿಗೆ ಬಾಕಿ ಹಣ ಪಾವತಿಸಿ ಭೂಮಿ ಹಸ್ತಾಂತರಕ್ಕೆ ರಾಜ್ಯ ಸರ್ಕಾರ ಕೂಡ ಕ್ರಮಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಕಳೆದ ವಾರ ಮಾತುಕತೆ ಕೂಡ ನಡೆಸಲಾಗಿತ್ತು. ಒಟ್ಟಾರೆಯಾಗಿ ಈ ಪ್ರಕ್ರಿಯೆಯನ್ನು ಕ್ಷಿಪ್ರಗತಿಯಲ್ಲಿ ಪೂರ್ಣಗೊಳಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದೇನೆ ಎಂದು ಯದುವೀರ್ ವಿವರಿಸಿದರು. ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ಸಾಂಸ್ಕೃತಿಕ ರಾಜಧಾನಿ ಮೈಸೂರು ಅಭಿವೃದ್ಧಿ ಮಾಡುವುದೇ ನನ್ನ ಸದ್ಯದ ಗುರಿ.
ದೇಶ-ವಿದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ, ಉದ್ಯಮಿಗಳಿಗೆ, ಅನುಕೂಲವಾಗಲು ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ ಮಾಡಬೇಕಾದ ತುರ್ತು ಅಗತ್ಯವಿದೆ. ಇದರಿಂದ ಸಂಪರ್ಕ ಸುಲಭವಾಗಲಿದೆ ಎಂದರು. ಭೂ ಸ್ವಾಧೀನ ಪ್ರಕ್ರಿಯೆಗೆ ಕೆಲವು ತಾಂತ್ರಿಕ ಅಡೆತಡೆಗಳಿವೆ. ನಿಭಾಯಿಸಿಕೊಂಡು ನಾವು ಮುನ್ನುಗ್ಗಬೇಕು. ಭೂಮಿ ಹಸ್ತಾಂತರ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ವಿಸ್ತರಣೆ ಯೋಜನೆಗೆ ಅಡ್ಡಿಯಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಪ್ರಯತ್ನದಿಂದ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ಇದಕ್ಕಾಗಿ ಸೂಕ್ತ ಮನವಿಯನ್ನು ಸಲ್ಲಿಸಿದ್ದೇನೆ ಎಂದು ಸಂಸದ ಯದುವೀರ್ ಸ್ಪಷ್ಟಪಡಿಸಿದರು. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದೇನೆ. ಜನರ ಸೇವೆ ಮಾಡಲು ಸಿಕ್ಕಿರುವ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುತ್ತೇನೆ ಎಂದು ಸಂಸದ ಯದುವೀರ್ ಉತ್ತರಿಸಿದರು.
ಹೆಚ್ಚಿನ ವಿಮಾನ ಸಂಚಾರಕ್ಕೆ ಮನವಿ :: ಇದೇ ವೇಳೆ ಮೈಸೂರಿಗೆ ಹೆಚ್ಚಿನ ವಿಮಾನಗಳನ್ನು ಮಂಜೂರು ಮಾಡಬೇಕು ಎಂಬ ಪ್ರಸ್ತಾವಿಟ್ಟಿದ್ದೇನೆ ಆದಷ್ಟು ಬೇಗ ಮೈಸೂರಿನಿಂದ ಹೆಚ್ಚಿನ ವಿಮಾನಗಳ ಸಂಚಾರ ಆರಂಭಿಸಲು ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಇದು ಕಾರ್ಯರೂಪಕ್ಕೆ ಬರುವ ವಿಶ್ವಾಸವೂ ಇದೆ ಎಂದು ಸಂಸದರು ಮಾಹಿತಿ ನೀಡಿದರು.