ಮಡಿಕೇರಿ NEWS DESK ಜ.17 : ಸ್ವಂತ ನೆಲೆ ಇಲ್ಲದೆ ಸಂಕಷ್ಟದ ಬದುಕು ನಡೆಸುತ್ತಿರುವ ಶೋಷಿತ ಸಮಾಜವನ್ನು ಕಡೆಗಣಿಸಿ, ಉಳ್ಳವರಿಗೆ ಅನುಕೂಲ ಕಲ್ಪಿಸಲು ಜಾರಿಗೆ ತಂದಿರುವ ‘ಭೂ ಗುತ್ತಿಗೆ ಆದೇಶ’ವನ್ನು ರಾಜ್ಯ ಸರಕಾರ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಭೂ ಗುತ್ತಿಗೆ ವಿರೋಧಿ ಹೋರಾಟ ಸಮಿತಿ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿತು.ಸರಕಾರದ ಆದೇಶವನ್ನು ವಿರೋಧಿಸಿ ನಗರದ ಫೀ.ಮಾ.ಕಾರ್ಯಪ್ಪ ವೃತ್ತದಿಂದ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಸಮಿತಿಯ ಪ್ರಮುಖರು ಹಾಗೂ ನಿವೇಶನ ರಹಿತರು ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. ಭೂ ಗುತ್ತಿಗೆ ಆದೇಶವನ್ನು ಸರಕಾರ ಹಿಂತೆಗೆದುಕೊಳ್ಳದಿದ್ದಲ್ಲಿ ಮುಖ್ಯಮಂತ್ರಿಗಳ ಮನೆಗೆ ಕಾಲ್ನಡಿಗೆ ಜಾಥಾ ನಡೆಸಲಾಗುವುದು. ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಸರಕಾರ ಅಗತ್ಯ ಕ್ರಮ ಕೈಗೊಳ್ಳುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. ಕಳೆದ ಹಲವು ದಶಕಗಳಿಂದ ನಿವೇಶನ ರಹಿತರು ತಮಗೆ ಭೂಮಿ ನೀಡುವಂತೆ ನಡೆಸುತ್ತಿರುವ ಹೋರಾಟಕ್ಕೆ ಸ್ಪಂದಿಸದ ಸರಕಾರ, ಭೂ ಗುತ್ತಿಗೆ ಆದೇಶದಂತೆ ಉಳ್ಳವರಿಗೆ ಕೇವಲ 1 ಸಾವಿರ ರೂ.ಗಳಂತೆೆ 30 ವರ್ಷಗಳಿಗೆ ಗುತ್ತಿಗೆ ನೀಡಲು ಮುಂದಾಗುತ್ತಿದ್ದು, ಇದು ಖಂಡನೀಯವೆAದು ಅಸಮಾಧಾನ ವ್ಯಕ್ತಪಡಿಸಿದರು. ಭೂ ಗುತ್ತಿಗೆ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಡಿ.ಎಸ್.ನಿರ್ವಾಣಪ್ಪ, ಸಮಿತಿಯ ಸಂಚಾಲಕರುಗಳಾದ ಕೆ.ಮೊಣ್ಣಪ್ಪ, ರಮೇಶ್ ಮಾಯಮುಡಿ, ಹೆಚ್.ಎ.ಪ್ರಕಾಶ್, ರಾಜ್ಯ ಸಂಘಟನಾ ಸಂಚಾಲಕ ಟಿ.ಎನ್.ಗೋವಿಂದಪ್ಪ ಮತ್ತಿತರ ಪ್ರಮುಖರು ಪ್ರತಿಭಟನೆಯ ನೇತೃತ್ವದ ವಹಿಸಿ ಸರಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.