ಮಡಿಕೇರಿ NEWS DESK ಜ.19 : ಹುಲಿ ದಾಳಿಯಿಂದ ಎರಡು ಗಬ್ಬದ ಹಸುಗಳು ಬಲಿಯಾಗಿರುವ ಘಟನೆ ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ದೇವನೂರು- ಸುಳುಗೋಡು ಗ್ರಾಮದಲ್ಲಿ ನಡೆದಿದೆ. ಸುಳುಗೋಡು ಗ್ರಾಮದ ಕೃಷಿಕ ಮುದ್ದಿಯಡ ದಿನು ಎಂಬುವವರಿಗೆ ಸೇರಿದ ಎರಡು ಹಸುಗಳನ್ನು ಹುಲಿ ಕೊಂದು ಭಾಗಶ: ತಿಂದಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮಸ್ಥರಲ್ಲಿ ಆತಂಕ ಮೂಡಿದ್ದು, ತಕ್ಷಣ ಹುಲಿ ಸೆರೆಗೆ ಅರಣ್ಯ ಇಲಾಖೆ ಮುಂದಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ::: ಕಾರ್ಯಾಚರಣೆ ಮತ್ತು ಪರಿಹಾರ ::: ವನ್ಯಜೀವಿ ಸಂರಕ್ಷಣಾ ಮಂಡಳಿಯ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು. ಹುಲಿಯನ್ನು ಸೆರೆ ಹಿಡಿಯಲು ಅಥವಾ ಅರಣ್ಯಕ್ಕೆ ಓಡಿಸಲು ಕ್ರಮ ಕೈಗೊಳ್ಳಲಾಗುವುದು. ಎರಡು ಗಬ್ಬದ ಹಸುಗಳು ಸಾವನ್ನಪ್ಪಿರುವುದರಿಂದ ಮಾಲೀಕರಿಗೆ ಪರಿಹಾರ ನೀಡುವ ಕುರಿತು ಮುಖ್ಯಮಂತ್ರಿಗಳ ಕಾನೂನು ಸಲಹಾಗಾರರು ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಅವರೊಂದಿಗೆ ಚರ್ಚಿಸಿರುವುದಾಗಿ ತಿಳಿಸಿದರು.