ಕುಶಾಲನಗರ NEWS DESK ಜ.19 : ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ಹೆಚ್ಚಾಗಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಮಕ್ಕಳ ಉತ್ತಮ ಭವಿಷ್ಯ ರೂಪಿಸಲು ಪೋಷಕರು ನಿಗಾ ವಹಿಸುವುದರೊಂದಿಗೆ ಸಂಘ ಸಂಸ್ಥೆಗಳು ಜಾಗೃತಿ ಅಭಿಯಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಯುವಕರನ್ನು ಕೆಡುಕಿನಿಂದ ದೂರ ಮಾಡಿ ಆರೋಗ್ಯವಂತ ಸಮಾಜ ನಿರ್ಮಿಸಲು ಸಹಕರಿಸಬೇಕು ಎಂದು ಕುಶಾಲನಗರ ಡಿ ವೈ ಎಸ್ ಪಿ ಗಂಗಾಧರಪ್ಪ ಸಲಹೆ ನೀಡಿದರು. ಜಿಲ್ಲಾ ವಿಸ್ಡಮ್ ಸ್ಟೂಡೆಂಟ್ ಸಂಸ್ಥೆ ಹಾಗೂ ಅಲ್ ಫುರ್ಕಾನ್ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ “ಟೀನ್‌ಸ್ಪೇಸ್” ಪ್ರೀತಿಯ ಪೋಷಕರ ವಾತ್ಸಲ್ಯದ ಮಕ್ಕಳಾಗೋಣ, ಮಾದಕ ವ್ಯಸನದಿಂದ ದೂರವಾಗೋಣ ಎಂಬ ಸಂದೇಶ ವಾಕ್ಯದೊಂದಿಗೆ ಮಾದಕ ಮುಕ್ತ ಅಭಿಯಾನ ಜಾಗೃತಿ ಸಮಾವೇಶವು ಕುಶಾಲನಗರ ಕನ್ನಿಕಾ ಇಂಟರ್ನ್ಯಾಷನಲ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಡ್ರಗ್ಸ್ ವಿರುದ್ಧ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಮೂಲಕ ದಾರಿ ತಪ್ಪುತ್ತಿರುವ ಯುವ ಸಮೂಹಕ್ಕೆ ಉತ್ತಮ ಮಾರ್ಗದರ್ಶನ ನೀಡಿ ಕೆಡುಕುಗಳಿಂದ ದೂರ ಮಾಡಿ ಶಿಕ್ಷಣದ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಕಾರ್ಯಕ್ರಮ ಆಯೋಜನೆ ಮಾಡಿರುವ ವಿಸ್ಡಮ್ ಸ್ಟೂಡೆಂಟ್ ಸಂಸ್ಥೆಯ ಕಾಳಜಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಾದಕ ವಸ್ತುಗಳ ಬಳಕೆ ನಿಷೇಧದ ಬಗ್ಗೆ ಗ್ರಂಥಗಳಲ್ಲಿ ಉಲ್ಲೇಖವಿದ್ದರೂ ಶೇ 10 ರಷ್ಟು ಮಂದಿ ಸೇವನೆಯಲ್ಲಿ ಮುಂದಾಗಿ ಮತ್ತಷ್ಟು ಯುವ ಸಮೂಹದ ಮಕ್ಕಳನ್ನು ವ್ಯಸನಿಗಳಾಗಿ ಮಾಡುತ್ತಿದ್ದು, ಅವರ ಭವಿಷ್ಯವನ್ನು ಹಾಳು ಮಾಡುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಅಕ್ರಮ ಮಾದಕ ದಂಧೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಲವಾರು ಪ್ರಕರಣಗಳನ್ನು ದಾಖಲಿಸಿ ಮಾದಕ ಸೇವನೆ ಹಾಗೂ ಮಾರಾಟಗಾರರನ್ನ ಬಂಧಿಸಲಾಗಿದೆ. ಹೊರ ರಾಜ್ಯ ಜಿಲ್ಲೆಗಳಿಂದ ಮಾದಕ ವಸ್ತುಗಳು ಬರುತ್ತಿರುವ ಬಗ್ಗೆ ನಿಗ ವಹಿಸಲಾಗಿದೆ ಇದನ್ನು ಮಟ್ಟ ಹಾಕಲು ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು. ಕೊಡಗನ್ನು ಮಾದಕ ಮುಕ್ತ ಜಿಲ್ಲೆಯನ್ನಾಗಿಸಿ ಮಕ್ಕಳ ಭವಿಷ್ಯವನ್ನು ರೂಪಿಸಲು ಮುಂದಾಗೋಣ ಎಂದು ಹೇಳಿದವರು. ಮಾದಕ, ಸೇವನೆ, ಬಳಕೆ, ಮಾರಾಟ, ದುಷ್ಪರಿಣಾಮ ಹಾಗೂ ಪ್ರಕರಣಗಳ ಬಗ್ಗೆ ನೆರೆದಿದ್ದ ಯುವ ಸಮೂಹಕ್ಕೆ ಮಾಹಿತಿ ನೀಡಿ ಮಾದಕ ಮುಕ್ತರಾಗೋಣ ಉತ್ತಮ ಭವಿಷ್ಯ ರೂಪಿಸಿಕೊಳ್ಳೋಣ ಎಂದು ಕಿವಿಮಾತು ಹೇಳಿದರು. ಹಿರಿಯ ನಿವೃತ್ತ ಶಿಕ್ಷಕ ನಜೀರ್ ಮಾಸ್ಟರ್ ಮಾತನಾಡಿ, ಈ ಹಿಂದೆ ಹೆಸರಾಂತ ವ್ಯಕ್ತಿಗಳು ವಿವಿಧ ದುಶ್ಚಟಗಳಿಗೆ ಬಲಿಯಾಗುತ್ತಿದ್ದರು. ಗ್ರಂಥಗಳ ಓದುವಿಕೆಯಿಂದ ಕೆಡುಕಿನಿಂದ ದೂರವಾಗಿ ಅದೆಷ್ಟೋ ಮಂದಿ ಪರಿವರ್ತನೆಗೊಂಡು ಮಾದಕ ವ್ಯಸನದಿಂದ ದೂರವಾಗಿದ್ದಾರೆ. ಯುವ ಸಮೂಹ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ದುಶ್ಚಟಗಳಿಂದ ದೂರವಾಗಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವುದರ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಅದೆಷ್ಟೋ ಮಹಾನ್ ಸಾಧಕರು ತಮ್ಮ ಭವಿಷ್ಯ ರೂಪಿಸಿಕೊಂಡು ಮುನ್ನಡೆಯಲು ಶಿಸ್ತು, ಸಮಯಪ್ರಜ್ಞೆ ಮೈಗೂಡಿಸಿಕೊಂಡು ಮುನ್ನಡೆದಿದ್ದಾರೆ. ಹಿರಿಯರ ಸಾಧನೆಯನ್ನ ಮನವರಿಕೆ ಮಾಡಿಕೊಂಡು ಭವಿಷ್ಯದ ಚಿಂತನೆಯೊಂದಿಗೆ ಮುನ್ನಡೆಯಬೇಕಾಗಿದೆ ಎಂದರು. ವಿಸ್ಡಮ್ ಆರ್ಗನೈಸರ್ ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜಿಲ್ಲೆಯ ನಾನಾ ಭಾಗಗಳಿಂದ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲ್ಗೊಂಡು ಸಲಹೆ ಹಾಗೂ ಮಾರ್ಗದರ್ಶನ ನೀಡಿದ್ದಾರೆ. ಇದರೊಂದಿಗೆ ನುರಿತ ಮಾರ್ಗದರ್ಶಕರಿಂದ ಪ್ರತಿಭೆ, ಆರೋಗ್ಯ, ಶಿಕ್ಷಣ, ಪರೀಕ್ಷೆ ಮಾರ್ಗದರ್ಶನ ಸೇರಿದಂತೆ ಶೈಕ್ಷಣಿಕ ಬೆಳವಣಿಗೆಯ ಬಗ್ಗೆ ಮಾಹಿತಿ ನೀಡಲಾಗಿದೆ ಎಂದರು. ಈ ಸಂದರ್ಭ ಪಟ್ಟಣ ಪಂಚಾಯಿತಿ ಸದಸ್ಯ ಅನಂದ್ ಕುಮಾರ್ , ಸಿದ್ದಾಪುರ ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ಶುಕೂರ್, ಪ್ರಮುಖರಾದ ಹನೀಪ್,ಮೊಹಮ್ಮದ್ ಅಬೂಬಕ್ಕರ್, ಸಮೀರ್ ಸಿದ್ದಾಪುರ, ಅಲೀಮ್ ,ಯೂಸುಫ್, ಸಜ್ಜಾದ್, ಹರ್ಷದ್ ಅಲ್ ಇಖಾಮಿ, ಸಫಾನ್ ಇಖಾಮಿ, ಅಸ್ಲಾಂ, ಅರೀಪ್, ಇಮ್ರಾನ್ ಉಸ್ತಾದ್, ನಿಶಾದ್ ಸ್ವಲಾಯಿ, ನಿಜಾಂ, ಅಶ್ರಫ್, ನೌಫಲ್ ಸೇರಿದಂತೆ ಮತ್ತಿತರರು ಹಾಜರಿದ್ದರು.