ಮಡಿಕೇರಿ ಜ.20 NEWS DESK : 2024-25ನೇ ಸಾಲಿನ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಅಡಿಯಲ್ಲಿ 7,02,731 ಗ್ರಾಮೀಣ ಮನೆಗಳನ್ನು ಅನುಮೋದಿಸುವ ಮೂಲಕ ಕರ್ನಾಟಕ ರಾಜ್ಯಕ್ಕೆ ನೀಡಿದ ಮಹತ್ವದ ಕೊಡುಗೆ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗ್ರಾಮೀಣಾಭಿವೃದ್ದಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಕೊಡಗು-ಮೈಸೂರು ಸಂಸದ ಯದುವೀರ್ ಒಡೆಯರ್ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಇದರಲ್ಲಿ ಹೆಚ್ಚುವರಿಯಾಗಿ 4,76,556 ಮನೆಗಳು ಸೇರಿದ್ದು, ಇದು ಹಿಂದಿನ 2,26,175 ಮನೆಗಳನ್ನು ಪೊರೈಸುವುದರ ಜೊತೆಗೆ “ಎಲ್ಲರಿಗೂ ವಸತಿ ಸೌಲಭ್ಯ” ಎಂಬ ಗುರಿಯನ್ನು ಸಾಧಿಸಲು ಸಹಕಾರಿಯಾಗುತ್ತದೆ ಎಂದರು. ಈ ಉಪಕ್ರಮವು ಗ್ರಾಮೀಣ ಕುಟುಂಬಗಳಿಗೆ ಭರವಸೆಯ ದಾರಿದೀಪವಾಗಿದ್ದು, ಅವರಿಗೆ ಅಗತ್ಯ ಸೌಲಭ್ಯಗಳೊಂದಿಗೆ ಸುರಕ್ಷಿತ ಮತ್ತು ಸುಭದ್ರ ಪಕ್ಕಾ ಮನೆಗಳನ್ನು ಕಲ್ಪಿಸುವುದಲ್ಲದೆˌ ಘನತೆ, ಸ್ಥಿರತೆ ಮತ್ತು ಸಬಲೀಕರಣದ ಭಾವನೆಯನ್ನು ನೀಡುತ್ತದೆ. ಇದು ವಿಶೇಷವಾಗಿ ಮಹಿಳೆಯರು ಮತ್ತು ಸಮಾಜದ ಕಟ್ಟ ಕಡೆಯ ವರ್ಗಗಳನ್ನು ಉನ್ನತಿಗೇರಿಸುವ ಜನ ಕಲ್ಯಾಣ ಯೋಜನೆಯಾಗಿದೆ. ಈ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಸೂಕ್ತ ಬೆಂಬಲ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರಕ್ಕೆ ಮನವಿ ಮಾಡಿದರು. ಈ ಯೋಜನೆಯು ಕರ್ನಾಟಕದಲ್ಲಿನ ಆರ್ಥಿಕವಾಗಿ ದುರ್ಬಲವಾಗಿರುವ 7 ಲಕ್ಷ ಕುಟುಂಬಗಳಿಗೆ ತಮ್ಮ ಬಹುದಿನಗಳ ಕನಸಾದ ಸುಸಜ್ಜಿತ ಪಕ್ಕಾ ಮನೆಯ ಕನಸನ್ನು ನನಸಾಗಿಸಲು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದ್ದಾರೆ.