ಸೋಮವಾರಪೇಟೆ ಜ.20 NEWS DESK : ರೈತರು ಕೃಷಿ ಮಾಡುತ್ತಿರುವ ಸಿ ಆ್ಯಂಡ್ ಡಿ ಭೂಮಿಯನ್ನು ಮೀಸಲು ಅರಣ್ಯಕ್ಕೆ ಸೇರಿಸುವ ಹುನ್ನಾರಕ್ಕೆ ಸರ್ಕಾರ ಮುಂದಾದರೆ ಮುಂದಿನ ದಿನಗಳಲ್ಲಿ ರೈತಾಪಿ ವರ್ಗ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸಿ, ಅಸ್ತಿತ್ವಕ್ಕಾಗಿ ಉಗ್ರ ಪ್ರತಿಭಟನೆ ಹಾದಿಯನ್ನು ಹಿಡಿಯಬೇಕಾಗುತ್ತದೆ ಎಂದು ರೈತ ಹೋರಾಟ ಸಮಿತಿಯ ಅಧ್ಯಕ್ಷ ಕೆ.ಬಿ.ಸುರೇಶ್ ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುರ್ನಾಲ್ಕು ದಶಕಗಳಿಂದ ಸಿ ಆ್ಯಂಡ್ ಡಿ ಭೂಮಿಯಲ್ಲಿ ರೈತರು ಕೃಷಿ ಮಾಡಿಕೊಂಡು ಬರುತ್ತಿದ್ದಾರೆ. ಆದರಲ್ಲೂ ಶಾಂತಳ್ಳಿ ಹೋಬಳಿ ಎಲ್ಲಾ ಗ್ರಾಮಗಳಲ್ಲಿ ಸಿ ಆ್ಯಂಡ್ ಡಿ ಜಾಗವನ್ನೇ ರೈತರು ನಂಬಿಕೊಂಡಿದ್ದಾರೆ. ಈಗ ಸಿ ಆ್ಯಂಡ್ ಡಿ ಜಾಗ ಅರಣ್ಯ ಇಲಾಖೆಗೆ ಸೇರಿದ್ದು ಎಂದು ಸೆಕ್ಷನ್ 4 ಸರ್ವೇಗೆ ಸರ್ಕಾರ ಆದೇಶ ನೀಡಿದೆ. ರೈತರು ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಸರ್ಕಾರ ಕೂಡಲೆ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿ ಹಕ್ಕುಪತ್ರಗಳನ್ನು ರೈತರಿಗೆ ಒದಗಿಸಬೇಕು ಎಂದು ಹೇಳಿದರು. ಸಿ ಆ್ಯಂಡ್ ಡಿ ಭೂಮಿಗೆ ಹಕ್ಕುಪತ್ರಗಳನ್ನು ನೀಡುವಂತೆ ಆಗ್ರಹಿಸಿ ಈಗಾಗಲೇ ರೈತರ ಸಮಾವೇಶಗಳು ನಡೆದಿವೆ. ಕಳೆದ ಬೆಳಗಾವಿ ಅಧಿವೇಶನದಲ್ಲಿ ಕೊಡಗಿನ ಶಾಸಕರು ಸಮಸ್ಯೆ ಬಗ್ಗೆ ಚರ್ಚೆ ಮಾಡಿದ್ದಾರೆ. ಅರಣ್ಯ ಹಾಗೂ ಕಂದಾಯ ಸಚಿವರಿಗೆ ಸಮಸ್ಯೆಯ ಬಗ್ಗೆ ಮನವರಿಕೆ ಆಗಿದೆ. ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚಿಸಿ ಸಿ ಆ್ಯಂಡ್ ಡಿ ಬಗೆಗೆ ಅಧ್ಯಯನ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ಆದರೆ ಇದುವರೆಗೆ ಸಮಿತಿಯನ್ನೇ ರಚಿಸಿಲ್ಲ ಎಂದು ದೂರಿದರು. ಈಗ ಅರಣ್ಯ ಸಚಿವರು ಸೂಕ್ಷ್ಮ ಪರಿಸರ ವಲಯದ ವ್ಯಾಪ್ತಿಯನ್ನು 10 ಕಿ.ಮೀ ಗೆ ನಿಗದಿಪಡಿಸಲಾಗುವುದು ಎಂದು ಹೇಳಿಕೆ ನೀಡಿದ್ದಾರೆ. ಇದು ಕಾರ್ಯಗತವಾದರೆ ಕೊಡಗಿನಲ್ಲಿ ಯಾವುದೇ ಗ್ರಾಮಗಳು ಉಳಿಯುವುದಿಲ್ಲ. ಇಡೀ ಕೊಡಗನ್ನು ಮೀಸಲು ಅರಣ್ಯ ಮಾಡಿದರೆ, ರೈತರು ಕಾಡಿನ ಸೊಪ್ಪು ತಿಂದು ಬದುಕಲು ಸಾಧ್ಯವೆ ಎಂದು ಪ್ರಶ್ನಿಸಿದರು. ಪಶ್ಚಿಮಘಟ ತಪ್ಪಲಿನ ಅಡಿಯಲ್ಲೇ ಕೊಡಗು ಜಿಲ್ಲೆ ಇದೆ. ಪುಷ್ಪಗಿರಿಯಿಂದ 10 ಕಿ.ಮೀ ದೂರದ ವರಗೆ ಸೂಕ್ಷ್ಮಪರಿಸರ ವಲಯದ ವ್ಯಾಪ್ತಿ ಬಂದರೆ ಬೆಟ್ಟದಳ್ಳಿ, ಶಾಂತಳ್ಳಿ, ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಉಳಿಯುವುದಿಲ್ಲ. ನಿಡ್ತ, ಮಾಲಂಬಿ, ಯಡವಾಡನಾಡು, ನಾಗರಹೊಳೆ, ಮಾಕುಟ್ಟ ಮೀಸಲು ಅರಣ್ಯ ವ್ಯಾಪ್ತಿಯ 10 ಕಿ.ಮೀ.ಸುತ್ತಮುತ್ತಲ ಗ್ರಾಮಗಳು ಸೂಕ್ಷ್ಮ ಪರಿಸರ ವಲಯಕ್ಕೆ ಸೇರಿದರೆ ರೈತರು ಗುಳೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು. ಕಂದಾಯ ಸಚಿವರು ಭರವಸೆ ನೀಡಿದಂತೆ ಮಲೆನಾಡು ವ್ಯಾಪ್ತಿಯ ಶಾಸಕರುಗಳು, ಅರಣ್ಯ, ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗು ರೈತ ಮುಖಂಡರ ಸಭೆ ಕರೆಯಬೇಕು. ಅಲ್ಲದೆ ಅರಣ್ಯ ಸಚಿವರು ಕೊಡಗಿನ ವಿಚಾರದಲ್ಲಿ ಸಲ್ಲದ ಹೇಳಿಕೆಯನ್ನು ನೀಡಬಾರದು. ಕೂಡಲೆ ಕೊಡಗಿಗೆ ಅಗಮಿಸಿ ಸಿ ಆ್ಯಂಡ್ ಡಿ ಜಾಗದ ಬಗ್ಗೆ ತಿಳಿದುಕೊಂಡು ರೈತರ ಸಮಸ್ಯೆಯನ್ನು ಆಲಿಸಬೇಕು ಎಂದು ಒತ್ತಾಯಿಸಿದರು. ಸಿ ಆ್ಯಂಡ್ ಡಿ ಭೂಮಿಯಲ್ಲಿ ಸೆಕ್ಷನ್ 4 ಸರ್ವೆಗೆ ಅರಣ್ಯ ಇಲಾಖೆ ಮುಂದಾಗಿ ರೈತಾಪಿ ವರ್ಗಕ್ಕೆ ಕಿರುಕುಳ ನೀಡಿದರೆ, ಕೊಡಗು ಬಂದ್ ಗೆ ಕರೆ ನೀಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಕರ್ನಾಟಕ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎಂ.ದಿನೇಶ್ ಮಾತನಾಡಿ, ಅರಣ್ಯ ಸಚಿವರು ರೈತ ವಿರೋಧಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಮಲೆನಾಡು ವಿಭಾಗದ ರೈತಾಪಿ ಜನರ ಸಮಸ್ಯೆ ಬಗ್ಗೆ ಅರಿವಿಲ್ಲ ಹಾಗು ಕಾಳಜಿಯೂ ಈ ಕಾರಣದಿಂದ ಅವರ ಖಾತೆಯನ್ನು ಬದಲಾಯಿಸಿ, ಮಲೆನಾಡಿನ ಶಾಸಕರೊಬ್ಬರಿಗೆ ನೀಡಬೇಕು ಎಂದು ಆಗ್ರಹಿಸಿದರು. ಸಿ ಆ್ಯಂಡ್ ಡಿ ಭೂಮಿಯನ್ನು ಅವೈಜ್ಞಾನಿಕವಾಗಿ ಹಿಂದಿನ ಅಧಿಕಾರಿಗಳು ಅರಣ್ಯ ಇಲಾಖೆಗ ಹಸ್ತಾಂತರಿಸಿದ್ದಾರೆ. ಅದನ್ನು ಕಂದಾಯ ಇಲಾಖೆಗೆ ವಾಪಾಸ್ಸು ಪಡೆಯುವುದು ಸರ್ಕಾರ ಕೆಲಸ. ಕಾನೂನು ಮಾಡಿರುವ ಶಾಸಕಾಂಗ ಮನಸ್ಸು ಮಾಡಿದರೆ ಒಂದೇ ವಾರದಲ್ಲಿ ಕಂದಾಯ ಇಲಾಖೆಗೆ ಕೊಡಬಹುದು. ಕಾಶ್ಮಿರದಲ್ಲಿ ಒಂದೇ ರಾತ್ರಿಯಲ್ಲಿ 370ನೇ ವಿಧಿಯನ್ನು ವಾಪಾಸ್ಸು ಪಡೆಯಲು ಸಾಧ್ಯವಾಗುತ್ತದೆ ಎಂದರೆ, ಸಿ ಆ್ಯಂಡ್ ಡಿ ಭೂಮಿಯನ್ನು ಕಂದಾಯ ಇಲಾಖೆಗೆ ವಾಪಾಸ್ಸು ಪಡೆಯಲು ಸಾಧ್ಯವಾಗುವುದಿಲ್ಲವೇ? ಎಂದು ಪ್ರಶ್ನಿಸಿದರು. ರೈತ ಪರವಾದ ಸರ್ಕಾರ ಎಂದು ಹೇಳಿಕೊಳ್ಳುವ ಜನಪ್ರತಿನಿಧಿಗಳು ರೈತಪರವಾಗಿ ಕೆಲಸ ಮಾಡಬೇಕು ಎಂದು ಹೇಳಿದರು. ರೈತರು ರಾಜಕಾರಣಿಗಳು ನಂಬಿಕೊಂಡು ಕುಳಿತರೆ ತಮ್ಮ ಆಸ್ತಿಯನ್ನು ಕಳೆದುಕೊಂಡು ಬೀದಿ ಪಾಲಾಗಬೇಕಾಗುತ್ತದೆ. ಈ ಸತ್ಯವನ್ನು ಅರಿತು ನಿರಂತರವಾಗಿ ಹೋರಾಟಕ್ಕೆ ಇಳಿಯಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಹರಗ ಶರಣ್, ಕೆ.ಎ.ಪ್ರಕಾಶ್, ಗೌಡಳ್ಳಿ ಪೃಥ್ವಿ ಇದ್ದರು.