ಮಡಿಕೇರಿ ಜ.20 : ಕೊಡಗು ವಿಶಾಲ ಕರ್ನಾಟಕದೊಂದಿಗೆ ವಿಲೀನವಾಗಿ ಇಂದು ಒಂದು ಪುಟ್ಟ ಜಿಲ್ಲೆಯಾಗಿ ಉಳಿದಿದೆ. ಕೊಡಗಿನ ಮೂಲ ನಿವಾಸಿಗಳಾದ ಕೊಡವರು ಹಾಗೂ ಕೊಡವ ಸಂಸ್ಕೃತಿಗೆ ಒಳಪಟ್ಟ ಇತರ ಜನಾಂಗಗಳ ಮೇಲೆ ಕಳೆದ ಹಲವು ದಶಕಗಳಿಂದ ನಿರಂತರವಾಗಿ ನಡೆಯುತ್ತಿರುವ ಜನಾಂಗೀಯ ನಿಂದನೆ, ಜನಾಂಗೀಯ ತಾರತಮ್ಯ ಹಾಗೂ ಸಾಮಾಜಿಕ ದೌರ್ಜನ್ಯದ ವಿರುದ್ಧ ಇದೇ ಫೆಬ್ರವರಿ 2ರಿಂದ 7ರವರೆಗೆ ಬ್ರಹತ್ ಕಾಲ್ನಡಿಗೆ ಜಾಥಾ ಮತ್ತು ಪ್ರತಿಭಟನೆ ನಡೆಸಲು ಇಂದು ವಿರಾಜಪೇಟೆಯ ಕೊಡವ ಸಮಾಜದ ಸಭಾಂಗಣದಲ್ಲಿ ವಿವಿಧ ಕೊಡವ ಸಮಾಜ ಹಾಗೂ ಸಂಘ ಸಂಸ್ಥೆಗಳ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು. ವಿರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಕುಂಬೇರ ಮನು ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಖಿಲ ಕೊಡವ ಸಮಾಜದ ಅಧ್ಯಕ್ಷರು ಸೇರಿದಂತೆ ವಿವಿಧ ಕೊಡವ ಸಮಾಜ ಹಾಗೂ ಸಂಘ ಸಂಸ್ಥೆಗಳ ಪ್ರಮುಖರು ಭಾಗಿಯಾಗಿ ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಕೊಡವ ಸಂಸ್ಕೃತಿಗೆ ಒಳಪಟ್ಟ ಎಲ್ಲಾ ಜನಾಂಗಗಳ ಸಹಕಾರದೊಂದಿಗೆ ದಕ್ಷಿಣ ಕೊಡಗಿನ ಗಡಿಭಾಗವಾದ ಕುಟ್ಟಾದಿಂದ ಜಿಲ್ಲಾಕೇಂದ್ರ ಮಡಿಕೇರಿಯವರೆಗೆ ಬೃಹತ್ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಕೊಡಗು ಕರ್ನಾಟಕದೊಂದಿಗೆ ವಿಲೀನವಾದಾಗ ಆಡಳಿತರೂಢ ಬಹುಸಂಖ್ಯಾತ ಸಮುದಾಯಗಳು ಭಾಷಾ ಅಲ್ಪಸಂಖ್ಯಾತ ಸಮುದಾಯಗಳ ಹಿತರಕ್ಷಣೆಯನ್ನು ಕಾಪಾಡಬೇಕೆಂಬ ಸ್ಪಷ್ಟ ಒಡಂಬಡಿಕೆ ಇತ್ತು. ಆದರೆ ಇಂದು ಕೊಡಗಿನಲ್ಲಿ ಕೊಡವ ಜನಾಂಗದ ಪಾಲಿಗೆ ಇದು ಉಲ್ಲಂಘನೆಯಾಗುತ್ತಲೇ ಬಂದಿದೆ ಎಂದು ಪ್ರಮುಖರು ಆರೋಪಿಸಿದರು. ಕೊಡವರನ್ನು ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಮೂಲೆಗುಂಪು ಮಾಡುವ ಷಡ್ಯಂತ್ರ ಈ ಪಟ್ಟಭದ್ರ ಹಿತಾಸಕ್ತಿಗಳಿಂದ ನಿರಂತರವಾಗಿ ನಡೆಯುತ್ತಾ ಬರುತ್ತಿದೆ. ಇದೀಗ ಕೊಡವರ ಪಾರಂಪರಿಕ ಉಡುಗೆ ತೊಡುಗೆಗಳನ್ನು ಹಾಗೂ ಆಚರಣೆಗಳನ್ನು ನಿರ್ಬಂಧಿಸುವ ಮಟ್ಟಕ್ಕೆ ಬಂದಿರುವುದು ಇತ್ತೀಚಿನ ಕೆಲವು ಘಟನೆಗಳಿಂದ ಸಾಬೀತಾಗಿದೆ. ರಾಜಕೀಯ ಪ್ರಭಾವವನ್ನು ಬಳಸಿ ಕೊಡವರನ್ನೇ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಲು ಎಲ್ಲಾ ಕುತಂತ್ರಗಳನ್ನು ಹೆಣೆಯುತ್ತಿರುವುದು ನೋಡಿದಾಗ ಈ ವ್ಯವಸ್ಥೆಯಲ್ಲಿ ಕೊಡವರಿಗೆ ಭದ್ರತೆ ಇಲ್ಲ ಎಂಬ ಭಾವನೆ ಉಂಟು ಮಾಡಿದೆ. ಇದು ಮಾತ್ರವಲ್ಲದೆ ಹಲವಾರು ಘಟನೆಗಳು ಕೊಡವ ಹಾಗೂ ಕೊಡವ ಸಂಸ್ಕೃತಿಯ ಮೇಲೆ ಜನಾಂಗೀಯ ದೌರ್ಜನ್ಯ ಮತ್ತು ತಾರತಮ್ಯಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು. ಕೊಡವ ಸಂಸ್ಕೃತಿ ಹಾಗೂ ಸಾಂಪ್ರದಾಯಿಕ ಹಕ್ಕಿನ ರಕ್ಷಣೆಯ ಹಿನ್ನೆಲೆಯಲ್ಲಿ ಕೊಡವ ಸಂಸ್ಕೃತಿ ಅಡಿಯಲ್ಲಿ ಬದುಕು ಸಾಗಿಸುತ್ತಿರುವ ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ಕರೆದುಕೊಂಡು ತಮಗಾಗಿರುವ ಅನ್ಯಾಯದ ವಿರುದ್ಧ ಬ್ರಹತ್ ಪಾದಯಾತ್ರೆಯನ್ನು ನಡೆಸಲು ಸಭೆ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು ಎಂದು ಪ್ರಮುಖರು ತಿಳಿಸಿದರು. ಸಭೆಯಲ್ಲಿ ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ಬೆಂಗಳೂರು ಕೊಡವ ಸಮಾಜ ಅಧ್ಯಕ್ಷ ಕರವಟ್ಟೀರ ಪೆಮ್ಮಯ್ಯ ಸೇರಿದಂತೆ ವಿವಿಧ ಕೊಡವ ಸಮಾಜಗಳ ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.