ಮಡಿಕೇರಿ ಜ.23 NEWS DESK : ಹುತಾತ್ಮರ ದಿನಾಚರಣೆಯನ್ನು ಜ.30 ರಂದು ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಕಳೆದ ಬಾರಿಯಂತೆ ಹುತಾತ್ಮರ ದಿನ ಪ್ರಯುಕ್ತ ಪೂಜ್ಯ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮವನ್ನು ಜಿಲ್ಲಾ ಖಜಾನೆಯಿಂದ ತೆಗೆದುಕೊಂಡು ಹೋಗಿ ಮೆರವಣಿಗೆ ಮೂಲಕ ಗಾಂಧಿ ಮಂಟಪದಲ್ಲಿರಿಸಿ ಸರ್ವಧರ್ಮ ಪ್ರಾರ್ಥನೆ ಮೂಲಕ ಹುತಾತ್ಮರ ದಿನಾಚರಣೆ ಆಚರಿಸಬೇಕಿದೆ ಎಂದರು. ಜಿಲ್ಲಾ ಖಜಾನೆಯಿಂದ ಮಹಾತ್ಮ ಗಾಂಧೀಜಿಯವರ ಚಿತಾಭಸ್ಮವನ್ನು ಹೊರತೆಗೆದು ಪುಷ್ಪಾಲಂಕಾರ ಮೂಲಕ ವಿಶೇಷ ಗೌರವ ಸಲ್ಲಿಸಿ, ನಂತರ ಪೊಲೀಸ್ ಗೌರವದೊಂದಿಗೆ ಮೆರವಣಿಗೆ ಮೂಲಕ ಹೊರಟು ಮಂಗೇರಿರ ಮುತ್ತಣ್ಣ ವೃತ್ತ, ಜನರಲ್ ತಿಮ್ಮಯ್ಯ ವೃತ್ತ ಮೂಲಕ ಗಾಂಧಿ ಮಂಟಪಕ್ಕೆ ತೆರಳಿ ಅಲ್ಲಿ ಸರ್ವಧರ್ಮ ಪ್ರಾರ್ಥನೆ ನಡೆಯಲಿದೆ. ಬಳಿಕ ಪೊಲೀಸ್ ಗೌರವ ಸಲ್ಲಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು. ಸರ್ವೋದಯ ಸಮಿತಿ ನಿಕಟ ಪೂರ್ವ ಅಧ್ಯಕ್ಷರಾದ ಟಿ.ಪಿ.ರಮೇಶ್ ಮಾತನಾಡಿ, ಗಾಂಧಿ ಮಂಟಪ ಆವರಣದಲ್ಲಿ ಸ್ವಚ್ಛಗೊಳಿಸಬೇಕು. ಪೊಲೀಸ್ ಬ್ಯಾಂಡ್ ನಿಯೋಜಿಸುವಂತಾಗಬೇಕು. ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಮಹಾತ್ಮ ಗಾಂಧೀಜಿ ಅವರ ಕುರಿತು ಪ್ರಿಯವಾದ ಹಾಡುಗಳನ್ನು ಹಾಡಲಿದ್ದಾರೆ. ಅಂದು ಬೆಳಗ್ಗೆ 11 ಗಂಟೆಗೆ ಸೈರನ್ ಮೊಳಗುವಂತಾಗಬೇಕು ಎಂದು ಕೋರಿದರು. ಸೈರನ್ ಅಳವಡಿಸುವ ಸಂಬಂಧ ಸರ್ವೋದಯ ಸಮಿತಿಯವರು ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸಲಹೆ ನೀಡಿದರು. ಸರ್ವೋದಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್ ಮಾತನಾಡಿ ಹುತಾತ್ಮರ ದಿನಾಚರಣೆಯಂದು ಸಂಜೆ ವೇಳೆಯಲ್ಲಿ ನಗರದ ಗಾಂಧಿಭವನದಲ್ಲಿ ಕೊಡಗು ಜಿಲ್ಲಾ ಜಾನಪದ ಪರಿಷತ್ತು ವತಿಯಿಂದ ಸರ್ವಧರ್ಮ ಪ್ರಾರ್ಥನಾ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು. ಸರ್ವೋದಯ ಸಮಿತಿಯ ಸದಸ್ಯರಾದ ಅಂಬೆಕಲ್ಲು ನವೀನ್ ಅವರು ಮಾತನಾಡಿ ಗಾಂಧಿ ಮಂಟಪದ ಆವರಣದಲ್ಲಿ ಹುತಾತ್ಮರ ದಿನದಂದು ವಿದ್ಯಾರ್ಥಿಗಳಿಗೆ ಲಘು ಉಪಾಹಾರ ಹಾಗೂ ಕುಡಿಯುವ ನೀರು ವ್ಯವಸ್ಥೆ ಮಾಡಬೇಕು ಎಂದು ಕೋರಿದರು. ಸರ್ವೋದಯ ಸಮಿತಿ ಸದಸ್ಯರಾದ ತೆನ್ನಿರಾ ಮೈನಾ ಮಾತನಾಡಿ, ಹುತಾತ್ಮರ ದಿನಾಚರಣೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಬೇಕು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದು ಮನವಿ ಮಾಡಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್ ಮಾತನಾಡಿ, ಹುತಾತ್ಮರ ದಿನಾಚರಣೆಗೆ ಪೊಲೀಸ್ ಇಲಾಖೆಯಿಂದ ಅಗತ್ಯ ಸಹಕಾರ ನೀಡಲಾಗುವುದು. ಪೊಲೀಸ್ ಬ್ಯಾಂಡ್ ನಿಯೋಜಿಸಲಾಗುವುದು ಎಂದರು. ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ, ಸದಸ್ಯರಾದ ಚಂದ್ರಶೇಖರ್, ತಹಶೀಲ್ದಾರ್ ಪ್ರವೀಣ್ ಕುಮಾರ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಂಜುಳ, ಜಿ.ಪಂ.ಇಇ ನಾಯಕ್, ಪೌರಾಯುಕ್ತರಾದ ಎಚ್.ಆರ್.ರಮೇಶ್, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕರಾದ ಪ್ರಸನ್ನ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಕವಿತಾ. ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಗಾಯತ್ರಿ, ಜಿಲ್ಲಾ ಸಾಂಖ್ಯಿಕ ಅಧಿಕಾರಿ ನಾರಾಯಣ, ಸ್ಕೌಟ್ಸ್ ಮತ್ತು ಗೈಡ್ಸ್‍ನ ಸಮನ್ವಯಾಧಿಕಾರಿ ದಮಯಂತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ, ದೇವರಾಜು, ಮಣಜೂರು ಮಂಜುನಾಥ್ ಇತರರು ಇದ್ದರು.