
ಮಡಿಕೇರಿ NEWS DESK ಜ.28 : ಐತಿಹಾಸಿಕ ಹಿನ್ನೆಲೆಯ ನಗರದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಸ್ಥಾನದ ದಸರಾ ಉತ್ಸವ ಸಮಿತಿ ಐವತ್ತು ವರ್ಷಗಳನ್ನು ಪೂರೈಸಿರುವ ಹಿನ್ನೆಲೆ ಹೊರ ತಂದಿರುವ ‘ದಶಮಿ’ ಪುಸ್ತಕವನ್ನು ಮಂಗಳವಾರ ಸಂಜೆ ಅನಾವರಣಗೊಳಿಸಲಾಯಿತು. ಸ್ಥಳೀಯ ರಾಜಾಸೀಟು ಬಳಿಯ ರಾಜದರ್ಶನ್ ಸಭಾಂಗಣದಲ್ಲಿ ಆಯೋಜಿತ ಸಮಾರಂಭದಲ್ಲಿ ಅತಿಥಿ ಗಣ್ಯರು ಪುಸ್ತಕವನ್ನು ಅನಾವರಣಗೊಳಿಸಿದರು. ಪುಸ್ತಕದಲ್ಲಿ ದೇವಸ್ಥಾನದ ದಸರಾ ಉತ್ಸವ ಸಮಿತಿ ನಡೆದು ಬಂದಿರುವ ಹಾದಿ, ಹಿಂದೆ ಸಮಿತಿಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರ ವಿವರ, ದೇವಸ್ಥಾನದ ಹಿನ್ನೆಲಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ಸನ್ಮಾನ- ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದಸರಾ ಸಮಿತಿ ಅಧ್ಯಕ್ಷ ರವಿ ಕರ್ಕೆರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಿತಿಯ ಮಾಜಿ ಅಧ್ಯಕ್ಷರು, ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಇಂದು ನಮ್ಮೊಂದಿಗೆ ಇಲ್ಲದ ಅಧ್ಯಕ್ಷರುಗಳ ಕುಟುಂಬಸ್ಥರನ್ನು, ಸಮಿತಿಗಾಗಿ ದುಡಿಯ ಹಿರಿಯ ಕಾರ್ಯಕರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು. ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ, ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ, ಅರಮೇರಿ ಕಳಂಚೇರಿ ಮಠಾಧೀಶರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಜಮಾಅತೆ ಇಸ್ಲಾಮಿ ಹಿಂದ್ ಮೈಸೂರು ವಲಯದ ಸಂಚಾಲಕ ಮೌಲಾನ ಯು.ಅಬ್ದುಸಲಾಮ್, ಮಡಿಕೇರಿ ಸಂತ ಮೈಕಲರ ಚರ್ಚ್ ನ ಧರ್ಮಾಧಿಕಾರಿ ರೆ.ಫಾ.ಜಾರ್ಜ್ ದೀಪಕ್ ಎ., ದೇವಸ್ಥಾನದ ಟ್ರಸ್ಟಿಗಳು ಹಾಗೂ ಪುಸ್ತಕದ ಸಂಪಾದಕರಾದ ಟಿ.ಪಿ.ರಮೇಶ್, ಪೋಷಕ ಸಂಪಾದಕರಾದ ಡಾ. ದೇವದಾಸ್ ಉಪಸ್ಥಿತರಿದ್ದರು. 







