
ವಿರಾಜಪೇಟೆ NEWS DESK ಆ.20 : ಹೈದರಾಬಾದ್ ನಲ್ಲಿ ಜರುಗಿದ 4 ನೇ ರಾಷ್ಟ್ರ ಮಟ್ಟದ ಸೆಸ್ಟೋಬಾಲ್ ಕ್ರೀಡೆಯಲ್ಲಿ ಚಿನ್ನದ ಪದಕವನ್ನು ಗೆದ್ದು ಕೊಡಗು ಜಿಲ್ಲೆಗೆ ಹಾಗೂ ಕರ್ನಾಟಕಕ್ಕೆ ಕೀರ್ತಿಯನ್ನು ತಂದ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಅಲ್ಬಿನ್ ಅಂತೋನಿ ಸಿ. ಕೆ. ಅವರನ್ನು ಇತ್ತೀಚೆಗೆ ವಿರಾಜಪೇಟೆ ತಾಲೂಕು ಮೈದಾನದಲ್ಲಿ ನಡೆದ ಸ್ವಾತಂತ್ರೋತ್ಸವದ ಸಮಾರಂಭದಲ್ಲಿ ಗಣ್ಯರು ಸನ್ಮಾನಿಸಿ ಗೌರವಿಸಿದರು.ವಿರಾಜಪೇಟೆಯವರಾದ ಅಲ್ಬಿನ್ ಅಂತೋನಿ ಕ್ರಿಸ್ಟಿ ಸಿ. ಎ ಹಾಗೂ ಸಂತ ಅನ್ನಮ್ಮ ಶಾಲೆಯ ದೈಹಿಕ ಶಿಕ್ಷಕಿ ಶೈನಿ ಆನ್ಸಿ ಸಿ ಎ ದಂಪತಿಗಳ ಪುತ್ರ. ಅಲ್ಬಿನ್ ಅಂತೋನಿ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ತರಗತಿಯಲ್ಲಿ ವ್ಯಾಸಂಗವನ್ನು ಮಾಡುತ್ತಿದ್ದು ವಿದ್ಯಾರ್ಥಿಯ ಸಾಧನೆಗೆ ಸಂತ ಅನ್ನಮ್ಮ ಪಿಯು ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಮದಲೈ ಮುತ್ತು ಹಾಗೂ ಕಾಲೇಜಿನ ಉಪನ್ಯಾಸಕರು ಪ್ರಶಂಸೆಯನ್ನು ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.








