ಸುಂಟಿಕೊಪ್ಪ ಜ.31 NEWS DESK : ಶಿಕ್ಷಣವನ್ನು ಉತ್ತೇಜಿಸುವ ದಿಸೆಯಲ್ಲಿ ಜಿಲ್ಲೆಯ ವಿವಿಧ ಶಾಲೆಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮಕ್ಕಳ ಶಿಕ್ಷಣಕ್ಕೆ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಡೆಸ್ಕ್ ಬೆಂಚ್ ವಿತರಿಸುತ್ತಿರುವುದು ಮಹತ್ಕಾರ್ಯವೆಂದು ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಜಗದೀಶ್ ಹೇಳಿದರು. ಮಾದಾಪುರ ಶ್ರೀಮತಿ ಡಿ.ಚೆನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಬೆಂಚ್ ಡೆಸ್ಕ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕವಾಗಿ ಸಮುದಾಯಕ್ಕೆ ಪ್ರೇರಣೆಯಾಗುವಂತಹ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದರು. ಶಿಕ್ಷಣಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ಸರಕಾರಿ, ಅನುದಾನಿತ ಶಾಲೆ ಹಾಗೂ ಖಾಸಗಿ ಶಾಲೆಗಳಿಗೆ ಅವರ ಬೇಡಿಕೆ ಅನುಸಾರ ಬೆಂಚ್ ಡೆಸ್ಕ್ಗಳನ್ನು ವಿತರಿಸುವ ಮೂಲಕ ಶಿಕ್ಷಣಕ್ಕೆ ಆದ್ಯತೆ ನೀಡಿರುವುದು ಹರ್ಷದಾಯಕ ವಿಚಾರವಾಗಿದೆ ಎಂದು ಹೇಳಿದರು. ಮಡಿಕೇರಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಸುಮಾರು 19 ಶಾಲೆಗಳು ಬೇಡಿಕೆ ಸಲ್ಲಿಸಿದಷ್ಟು 159 ಬೆಂಚ್ ಡೆಸ್ಕ್ ವಿತರಣೆ ಮಾಡಲಾಗಿದೆ ಎಂದು ಯೋಜನಾಧಿಕಾರಿ ಪುರುಷೋತ್ತಮ್ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಡಿ.ನರಸಿಂಹ, ಶ್ರೀಮತಿ ಚೆನ್ನಮ್ಮ ಕಾಲೇಜು ಪ್ರಾಂಶುಪಾಲ ಸಿ.ಜೆ.ಮಂದಪ್ಪ, ಗ್ರಾ.ಪಂ.ಅಧ್ಯಕ್ಷೆ ಬೋಜಮ್ಮ, ಒಕ್ಕೂಟದ ಅಧ್ಯಕ್ಷೆ ಪುಷ್ಪ, ಮೇಲ್ವಿಚಾರಕಿ ವಿನೋದ, ಸೇವಾಪ್ರತಿನಿಧಿ ಕುಸುಮ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.