
ಮಡಿಕೇರಿ ಜ.31 NEWS DESK : ಮಡಿಕೇರಿಯಲ್ಲಿ ಫೆ.7 ರಂದು ನಡೆಯಲಿರುವ ಕೊಡವ ಸಮುದಾಯದ ಒಮ್ಮತದ ರ್ಯಾಲಿಗೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಬೆಂಬಲ ನೀಡಲಿದೆ ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡವ ಲೋಕದ ಅಚಲ, ಅದಮನೀಯ ಧ್ವನಿ ಮತ್ತು ಆತ್ಮಸಾಕ್ಷಿಯಾಗಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಫೆ.7 ರಂದು ಮಡಿಕೇರಿಯಲ್ಲಿ ನಡೆಯಲಿರುವ ಕೊಡವರ ಒಮ್ಮತದ ರ್ಯಾಲಿಗೆ ಬೆಂಬಲವನ್ನು ನೀಡಲಿದೆ. ಸಿಎನ್‍ಸಿಯು ಕಳೆದ 35 ವರ್ಷಗಳಿಂದ ಪ್ರತಿಪಾದನೆ ಮಾಡುತ್ತಾ ಬಂದಿರುವ ಶಾಸನಬದ್ಧ ಹಕ್ಕೊತ್ತಾಯಗಳನ್ನು ಅದರ ತಾರ್ಕಿಕ ಹಂತಕ್ಕೆ ತಲುಪಿಸುವ ದೃಢ ಸಂಕಲ್ಪ ತೊಟ್ಟಿದೆ ಎಂದು ಹೇಳಿದ್ದಾರೆ. ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ಸ್ವಯಂ ಆಡಳಿತ ಮತ್ತು ಆಂತರಿಕ ಸ್ವ-ನಿರ್ಣಯದ ಹಕ್ಕನ್ನು ಪರಿಗಣಿಸಬೇಕು. ಯುಎನ್ ಆದಿಮ ಸಂಜಾತ ಹಕ್ಕುಗಳು- ವಿಶ್ವ ರಾಷ್ಟ್ರ ಸಂಸ್ಥೆಯ ಅಂತರಾಷ್ಟ್ರೀಯ ಕಾನೂನಿಡಿಯಲ್ಲಿ ಕೊಡವರನ್ನು ಆದಿಮಸಂಜಾತ ಜನರು ಎಂದು ಗುರುತಿಸುವುದು. ಆದಿಮ ಸಂಜಾತ ಕೊಡವ ಬುಡಕಟ್ಟು ಪಂಗಡ ವರ್ಗೀಕರಣ : ಭಾರತೀಯ ಸಂವಿಧಾನದ ವಿಧಿ 340 ಮತ್ತು 342 ರ ಅಡಿಯಲ್ಲಿ ಆದಿಮ ಸಂಜಾತ ಕೊಡವರನ್ನು ಬುಡಕಟ್ಟು ಪಟ್ಟಿಗೆ ಸೇರಿಸುವುದು. ಸಾಂವಿಧಾನಿಕ ಖಾತರಿ : ಸೂಕ್ಷ್ಮಾತಿ ಸೂಕ್ಷ್ಮ ಕೊಡವರ ಭೂಮಿ, ಭಾಷೆ, ಸಾಂಸ್ಕೃತಿಕ ಪರಂಪರೆ, ರಾಜಕೀಯ ಮತ್ತು ಆರ್ಥಿಕ ಸ್ವಾತಂತ್ರ್ಯದ ರಕ್ಷಣೆಗೆ ಸಂವಿಧಾನದ ಖಾತ್ರಿ ನೀಡಬೇಕು ಎನ್ನುವುದು ಸಿಎನ್‍ಸಿಯ ಹಕ್ಕೊತ್ತಾಯವಾಗಿದೆ ಎಂದು ತಿಳಿಸಿದ್ದಾರೆ. 1956 ರಲ್ಲಿ ಕೊಡವ ತಾಯ್ನಾಡಿನ ಕೂರ್ಗ್ ಭಾಗ ‘ಸಿ’ ರಾಜ್ಯದ ವಿಲೀನದ ನಂತರ, ಕರ್ನಾಟಕದ ಪ್ರಮುಖ ಸಮುದಾಯ ಆದಿಮಸಂಜಾತ ಕೊಡವರಿಗೆ ಸಂಬಂಧಿಸಿದಂತೆ ವ್ಯವಸ್ಥಿತವಾಗಿ ಸಾಂವಿಧಾನಿಕ ಉಲ್ಲಂಘನೆಯನ್ನು ಉಂಟುಮಾಡಿತು. ಕೊಡವರನ್ನು ಎಲ್ಲಾ ಅಂಶಗಳಲ್ಲಿ ಕಡೆಗಣಿಸಲಾಗಿದೆ, ತಾರತಮ್ಯ ಮಾಡಲಾಗಿದೆ, ನಿರ್ಲಕ್ಷಿಸಲಾಗಿದೆ, ಅವಮಾನಿಸಲಾಗಿದೆ ಮತ್ತು ಅಗೌರವಿಸಲಾಗಿದೆ ಎಂದು ಆರೋಪಿಸಿದ್ದಾರೆ. ಸಿಎನ್‍ಸಿ ಸಂಘಟನೆಯು ಕಳೆದ 35 ವರ್ಷಗಳಿಂದಲೂ ಮೈನಸ್ಕ್ಯೂಲ್ ಮೈಕ್ರೋ ಆದಿಮಸಂಜಾತ ಕೊಡವರ ರಾಜ್ಯಾಂಗದತ್ತ ಹಕ್ಕುಗಳಿಗಾಗಿ ಅವಿಶ್ರಾಂತವಾಗಿ, ಅಹೋರಾತ್ರಿ ಶಾಂತಿಯುತವಾಗಿ ಛಲಬಿಡದೆ ಶ್ರಮಿಸುತ್ತಿದೆ. ಕೊಡವ ಆತ್ಮಸಾಕ್ಷಿಯನ್ನು ಪ್ರದರ್ಶಿಸಲು ಕೊಡವರ ಒಮ್ಮತದ ಉದ್ದೇಶಿತ ರ‍್ಯಾಲಿಗೆ ಕೊಡವ ನ್ಯಾಷನಲ್ ಕೌನ್ಸಿಲ್ ಈಗ ತನ್ನ ಒಗ್ಗಟ್ಟನ್ನು ವಿಸ್ತರಿಸುತ್ತಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದ್ದಾರೆ.









