
ಮಡಿಕೇರಿ NEWS DESK ಜ.31 : ಕಟ್ಟೆಮಾಡು ಶ್ರೀ ಮಹಾ ಮೃತ್ಯುಂಜಯ ದೇವಾಲಯದ ಪ್ರಧಾನ ಅರ್ಚಕ ವಿಘ್ನೇಶ್ ಭಟ್ ಹಾಗೂ ಅವರ ತಾಯಿಯ ಮೇಲೆ ಮೂರ್ನಾಡಿನಲ್ಲಿ ಕಿಡಿಗೇಡಿಗಳು ನಡೆಸಿದ ಹಲ್ಲೆ ಪ್ರಕರಣವನ್ನು ತೀವ್ರವಾಗಿ ಖಂಡಿಸುವುದಾಗಿ ಕೊಡಗು ಜಿಲ್ಲಾ ವಿಶ್ವ ಹಿಂದು ಪರಿಷತ್ ಮಠ-ಮಂದಿರ್ ಪ್ರಮುಖ್ ಡಾ.ಮಹಾಬಲೇಶ್ವರ್ ತಿಳಿಸಿದ್ದಾರೆ.
ದೇವಾಲಯ, ದೇವಾಲಯದ ಅರ್ಚಕರು ಹಾಗೂ ಧಾರ್ಮಿಕ ಪೂಜೆ, ಪುನಸ್ಕಾರ ಇವೆಲ್ಲವು ಹಿಂದೂ ಧರ್ಮದ ಮುಖ್ಯ ಆಧಾರ ಸ್ತಂಭವಾಗಿದೆ. ಹಿಂದೂ ಧರ್ಮವನ್ನು ಉಳಿಸಲು ಅರ್ಚಕರು ನೀಡುತ್ತಿರುವ ಕೊಡುಗೆ ಅಪಾರವಾಗಿದೆ. ಈ ರೀತಿಯ ಹಲ್ಲೆ, ಜೀವ ಬೆದರಿಕೆ ಪ್ರಕರಣಗಳು ಕುತಂತ್ರದ ಒಂದು ಭಾಗವಾಗಿದೆ. ಅರ್ಚಕರ ಮೇಲೆ ಹಲ್ಲೆ ನಡೆದು 5 ದಿನ ಕಳೆದರೂ ತಪ್ಪಿತಸ್ಥರನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ವಿಫಲವಾಗಿದೆ. ಪ್ರಕರಣವನ್ನು ಲಘುವಾಗಿ ಪರಿಗಣಿಸಿದಂತೆ ಕಂಡು ಬರುತ್ತಿದೆ ಎಂದು ಆರೋಪಿಸಿದ್ದಾರೆ. ದುಷ್ಕರ್ಮಿಯನ್ನು ತಕ್ಷಣ ಬಂಧಿಸಿ, ಅರ್ಚಕರಿಗೆ ಹಾಗೂ ಅರ್ಚಕರ ಕುಟುಂಬಕ್ಕೆ ಆದ ನ್ಯಾಯ ಒದಗಿಸಬೇಕು. ತಪ್ಪಿದಲ್ಲಿ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಡಾ.ಮಹಾಬಲೇಶ್ವರ್ ಭಟ್ ಎಚ್ಚರಿಕೆ ನೀಡಿದ್ದಾರೆ.








