ವಿರಾಜಪೇಟೆ ಫೆ.1 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವಿರಾಜಪೇಟೆ ಬಿ.ಸಿ ಟ್ರಸ್ಟ್, ಸ್ವಸಹಾಯ ಸಂಘಗಳ ಒಕ್ಕೂಟಗಳ ಆಶ್ರಯದಲ್ಲಿ ಗ್ರಾಮಸ್ಥರಿಗೆ ಪರಿಸರ ಮಾಹಿತಿ ಕಾರ್ಯಕ್ರಮ ನಡೆಯಿತು. ಮೂರ್ನಾಡು ವಲಯದ ಮರಗೋಡು ಕಾರ್ಯಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಡಗದಾಳು ಗ್ರಾಮದ ಪ್ರಗತಿಪರ ಕೃಷಿಕರಾದ ಮಂಜುಳ ಅವರು ಆಗಮಿಸಿ ಸದಸ್ಯರಿಗೆ ಪರಿಸರ ಸಂರಕ್ಷಣೆ ಮಣ್ಣಿನ ಸವಕಳಿ ಮತ್ತು ಏಲಕ್ಕಿ ಕೃಷಿಯ ಬಗ್ಗೆ ಮಾಹಿತಿ ನೀಡಿದರು. ಕೃಷಿ ಮೇಲ್ವಿಚಾರಕರು ಆಧುನಿಕ ತಂತ್ರಜ್ಞಾನದ ಮೂಲಕ ಕೃಷಿಯಲ್ಲಿ ಆಗುವ ಪರಿಣಾಮ ಹಾಗೂ ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭದಾಯಕ ಕೃಷಿ ಪದ್ಧತಿಯ ಬಗ್ಗೆ ಮಾಹಿತಿ ನೀಡಿದರು. ನಂತರ ಗ್ರಾಮಸ್ಥರಿಂದ ಗಿಡ ನಾಟಿ ಮಾಡಲಾಯಿತು. ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದ ಪ್ರತಾಪ್, ಸೇವಾ ಪ್ರತಿನಿಧಿಯಾದ ಲತಾ, ಒಕ್ಕೂಟದ ಪದಾಧಿಕಾರಿಗಳು ಹಾಗೂ ಸಂಘದ ಸದಸ್ಯರು ಗ್ರಾಮಸ್ಥರು ಹಾಜರಿದ್ದರು.