ಮಡಿಕೇರಿ ಫೆ.1 NEWS DESK : ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಾಗಿ ಸುಮಾರು 58 ಸಾವಿರ ಕೋಟಿ ರೂ ವೆಚ್ಚ ಮಾಡುತ್ತಿದೆ. ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರು ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು. ಜಲಸಂಪನ್ಮೂಲ ಇಲಾಖೆ ಮತ್ತು ಕಾವೇರಿ ನೀರಾವರಿ ನಿಗಮ ನಿಯಮಿತದ ವತಿಯಿಂದ ಆಯೋಜಿಸಲಾಗಿದ್ದ ಭಾಗಮಂಡಲ ಮಡಿಕೇರಿ ಮತ್ತು ತಲಕಾವೇರಿ ಮತ್ತು ನಾಪೋಕ್ಲು –ತಲಕಾವೇರಿ ರಸ್ತೆಗಳ ಛೇದಕದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಮೇಲು ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿರುವುದು ಇಡೀ ದೇಶದಲ್ಲಿ ಚರ್ಚಿಸಲಾಗುತ್ತಿದೆ. ಜೊತೆಗೆ ವಿವಿಧ ರಾಜ್ಯಗಳಲ್ಲಿ ಗ್ಯಾರಂಟಿ ಮಾದರಿಯನ್ನು ಅನುಸರಿಸಲಾಗುತ್ತಿದೆ ಎಂದು ಶಾಸಕರು ವಿವರಿಸಿದರು. ಗ್ಯಾರಂಟಿ ಯೋಜನೆಗಳು ಶೇ.80 ರಷ್ಟು ಬಡಜನರಿಗೆ ತಲುಪುತ್ತಿವೆ. ಗ್ಯಾರಂಟಿ ಯೋಜನೆ ವಿರೋಧಿಸುವವರು ಸಂವಿಧಾನ ವಿರೋಧಿಗಳು ಎಂದು ಪ್ರತಿಪಾದಿಸಿದರು. ಮುಂದಿನ ಮೂರುವರೆ ವರ್ಷದ ಅವಧಿಯಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸ ಆಗಲಿವೆ ಎಂದು ಎ.ಎಸ್.ಪೊನ್ನಣ್ಣ ನುಡಿದರು. ಕೊಡಗು ಜಿಲ್ಲೆಯಲ್ಲಿಯೂ ಸಹ ಬಡವರು ಇದ್ದಾರೆ. ಎಲ್ಲಾ ಜನರ ಅಭಿವೃದ್ಧಿಗೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರು ಸ್ಪಂದಿಸಲಿದ್ದಾರೆ. ಪ್ರಮುಖವಾಗಿ ವಿದ್ಯುತ್, ರಸ್ತೆ ಮತ್ತಿತ್ತರ ಮೂಲ ಸೌಲಭ್ಯಕ್ಕೆ ಒತ್ತು ನೀಡಲಾಗಿದೆ ಎಂದರು. ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಗ್ಯಾರಂಟಿ ಯೋಜನೆ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ, ಅರುಣ್ ಮಾಚಯ್ಯ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಮಹೇಶ್ ನಾಚಯ್ಯ, ಪ್ರಮುಖರಾದ ಎಚ್.ಎಸ್.ಚಂದ್ರಮೌಳಿ, ಎಂ.ಎ.ಪೊನ್ನಪ್ಪ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಮಹೇಶ್, ಮುಖ್ಯ ಎಂಜಿನಿಯರ್ ಆರ್.ಎಲ್.ವೆಂಕಟೇಶ್, ಅಧೀಕ್ಷಕ ಎಂಜಿನಿಯರ್ ರಘುಪತಿ, ಕಾರ್ಯಪಾಲಕ ಎಂಜಿನಿಯರ್ ಐ.ಕೆ.ಪುಟ್ಟಸ್ವಾಮಿ, ಎಇಇ ಗೋಕುಲ, ಗ್ಯಾರಂಟಿ ಯೋಜನೆ ತಾಲ್ಲೂಕು ಅನುಷ್ಠಾನ ಸಮಿತಿ ಅಧ್ಯಕ್ಷರು ಇತರರು ಇದ್ದರು.