ಮಡಿಕೇರಿ ಫೆ.1 NEWS DESK : ಕೇಂದ್ರ ಸರಕಾರದ ಹಣಕಾಸು ಸಚಿವರಾದ ನಿರ್ಮಲ ಸೀತಾರಾಮನ್ ಅವರು ಜನಪರ ಮತ್ತು ರೈತಪರ ಬಜೆಟ್ ನ್ನು ಮಂಡಿಸಿದ್ದಾರೆ ಎಂದು ಕೊಡಗು ಜಿಲ್ಲಾ ಬಿಜೆಪಿಯ ಸಾಮಾಜಿಕ ಜಾಲತಾಣದ ಪ್ರಧಾನ ಸಂಚಾಲಕ ತೇಲಪಂಡ ಶಿವಕುಮಾರ್ ನಾಣಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಜನಸಾಮಾನ್ಯರಿಗೆ ಹೊರೆಯಾಗದ ಬಜೆಟ್, ತೆರಿಗೆ ಹೊಣೆಗಾರಿಕೆಯ ಮಿತಿಯನ್ನು 12 ಲಕ್ಷ ರೂ.ಗಳಿಗೆ ಏರಿಕೆ ಮಾಡಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಮಧ್ಯಮ ವರ್ಗ ಹಾಗೂ ಕೃಷಿಕರಿಗೆ ಹೆಚ್ಚು ಅನುಕೂಲ ಕಲ್ಪಿಸುವ ಬಜೆಟ್ ಆಗಿದೆ. ಪ್ರಧಾನಮಂತ್ರಿ ಧನ್ ಧಾನ್ಯ ಕೃಷಿ ಯೋಜನೆಯ ಮೂಲಕ 100 ಜಿಲ್ಲೆಗಳನ್ನು ಆಯ್ಕೆ ಮಾಡಿ ಕೃಷಿ ಜಿಲ್ಲೆಯೆಂದು ಘೋಷಿಸುವುದರಿಂದ ಆಯಾ ಜಿಲ್ಲೆಗಳ ರೈತರು ಸರಕಾರದ ಅನೇಕ ಕೃಷಿ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ಕೃಷಿಗೆ ಹೆಚ್ಚು ಉತ್ತೇಜನ ನೀಡುವ ಯೋಜನೆ ಇದಾಗಿದ್ದು, ಬೆಂಬಲ ಬೆಲೆ, ಗೊಬ್ಬರ, ಬಿತ್ತನೆ ಬೀಜ, ಕೃಷಿ ಪರಿಕರಗಳನ್ನು ಸುಲಭವಾಗಿ ಪಡೆಯಬಹುದಾಗಿದೆ. ಜೀವರಕ್ಷಕ ಔಷಧಗಳ ಸೀಮಾ ಸುಂಕ ಸಂಪೂರ್ಣ ರದ್ದು ಮಾಡಿರುವುದು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ ಕೇರ್ ಕ್ಯಾನ್ಸರ್ ಕೇಂದ್ರಗಳ ಸ್ಥಾಪನೆಗೆ ಒತ್ತು ನೀಡಿರುವುದು ಕೇಂದ್ರ ಸರಕಾರಕ್ಕೆ ದೇಶದ ಜನರ ಆರೋಗ್ಯದ ಮೇಲಿರುವ ಕಾಳಜಿಯನ್ನು ತೋರಿಸುತ್ತದೆ ಎಂದು ತೇಲಪಂಡ ಶಿವಕುಮಾರ್ ನಾಣಯ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.