
ವಿರಾಜಪೇಟೆ ಫೆ.4 NEWS DESK : ಕ್ರೀಡಾ ಜಿಲ್ಲೆಯಾದ ಕೊಡಗಿನಲ್ಲಿ ಎಲ್ಲಾ ಕ್ರೀಡೆಗಳಿಗೆ ಸಹಕಾರ ನೀಡುವಂತೆ ಬ್ಯಾಡ್ಮಿಂಟನ್ ಕ್ರೀಡೆಗೂ ಹೆಚ್ಚಿನ ಅವಕಾಶ ಕಲ್ಪಿಸಬೇಕು ಎಂದು ಉದ್ಯಮಿ ಮತ್ತು ಕಾಂಗ್ರೆಸ್ ಪಕ್ಷದ ಪ್ರಮುಖ ಸಿ.ಎ. ನಾಸಿರ್ ಅಭಿಪ್ರಾಯ ವ್ಯಕ್ತಪಡಿಸಿದರು. ವಿರಾಜಪೇಟೆ ಫ್ರೆಂಡ್ಸ್ ಯುವಕ ಸಂಘದ ವತಿಯಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಚಿಕ್ಕಪೇಟೆಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕೊಡಗು ಬ್ಯಾಡ್ಮಿಂಟನ್ ಲೀಗ್ 2ನೇ ಅವೃತ್ತಿಯ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಭಾರತ ದೇಶವು ಬ್ಯಾಡ್ಮಿಂಟನ್ ಪಂದ್ಯಾಟಕ್ಕೆ ತನ್ನದೇಯಾದ ಕೊಡುಗೆಗಳನ್ನು ನೀಡಿದೆ. ಅದರಂತೆ ಕೊಡಗಿನ ಬ್ಯಾಡ್ಮಿಂಟನ್ ಕಲಿಗಳು ರಾಜ್ಯ, ದೇಶವನ್ನು ಪ್ರತಿನಿಧಿಸಿ ಕ್ರೀಡಾ ಸಾಧನೆಯನ್ನು ತೋರಿದ್ದು, ಮುಂದಿನ ದಿನಗಳಲ್ಲಿ ಕೊಡಗಿನಿಂದ ಹೆಚ್ಚಿನ ಕ್ರೀಡಾಪಟುಗಳು ಪಾಲ್ಗೊಳ್ಳುವಂತಾಗಬೇಕು ಎಂದು ಕರೆ ನೀಡಿದರು. ಜೆ.ಡಿ.ಎಸ್ ಜಿಲ್ಲಾ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಜಾಸಿರ್ ಮಾತನಾಡಿದರು. ಮುಂಜಾನೆ ನಡೆದ ಲೀಗ್ ಪಂದ್ಯಾವಳಿಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು. ರಾತ್ರಿ ಲೀಗ್‍ನ ಅಂತಿಮ ಪಂದ್ಯಾಟ ಮುಕ್ತಾಯ ಕಂಡಿತು.
ಕ್ರೀಡಾ ವರದಿ :: ವಿರಾಜಪೇಟೆ ಫ್ರೆಂಡ್ಸ್ ಯವಕ ಸಂಘ ಷಟಲ್ ಬ್ಯಾಡ್ಮಿಂಟನ್ ಕೊಡಗು ಲೀಗ್ ಎರಡನೇ ಆವೃತ್ತಿಯಲ್ಲಿ ಕೊಡಗು ಜಿಲ್ಲೆಯ ಪ್ರತಿಷ್ಠಿತ ಒಟ್ಟು 6 ತಂಡಗಳು ಪ್ರತಿನಿಧಿಸಿದವು. 6 ತಂಡಗಳಲ್ಲಿ ಜಿಲ್ಲೆ, ರಾಜ್ಯ, ದೇಶ ಮತ್ತು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ 110 ಮಂದಿ ಬ್ಯಾಡ್ಮಿಂಟನ್ ಕ್ರೀಡಾ ಪಟುಗಳು ತಮ್ಮ ಪ್ರದರ್ಶನ ತೋರಿದರು. ಒಂದು ತಂಡಕ್ಕೆ ಒಟ್ಟು 5 ಪಂದ್ಯಗಳಂತೆ 60 ಪಂದ್ಯಗಳು ನಡೆದವು. ಅಂತಿಮ ಪಂದ್ಯಾವಳಿಯಲ್ಲಿ ಬಾರ್ ಬೇಡಿಯನ್ ಸಿದ್ದಾಪುರ ಮತ್ತು ಜಂಪ್ ಸ್ಮಾಷರ್ಸ್ ಕುಶಾಲನಗರ ತಂಡಗಳ ನಡುವೆ ನಡೆದು 3-1 ಅಂತರಗಳ ಅನುಪಾತದಲ್ಲಿ ಜಂಪ್ ಸ್ಮಾಷರ್ಸ್ ತಂಡವು ಬಾರ್ ಬೇಡಿಯನ್ ತಂಡವನ್ನು ಮಣಿಸಿ ವಿಜಯ ಸಾಧಿಸಿತು. ಬಾರ್ ಬೇಡಿಯನ್ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಶೀಹಾ ಸ್ಮಾಷರ್ಸ್ ವಿರಾಜಪೇಟೆ ಮೂರನೇ ಸ್ಥಾನ ಪಡೆದುಕೊಂಡಿತು. ಪ್ರಥಮ ವಿಜೇತ ತಂಡಕ್ಕೆ ಆಕರ್ಷಕ ಟ್ರೋಫಿ ಮತ್ತು 50,000 ರೂ ನಗದು, ದ್ವಿತೀಯ ಸ್ಥಾನ ಗಿಟ್ಟಿಸಿದ ತಂಡಕ್ಕೆ ಟ್ರೋಫಿ ಮತ್ತು 30,000 ರೂ ನಗದು ನೀಡಲಾಯಿತು. ತೃತೀಯ ಸ್ಥಾನ ಪಡೆದ ತಂಡಕ್ಕೆ ಟ್ರೋಫಿ ನೀಡಿ ಗೌರವಿಸಲಾಯಿತು. ರಾಜ್ಯ ಮಟ್ಟದ ತೀರ್ಪುಗಾರರು ಪಂದ್ಯಾವಳಿಯ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಟ್ರೋಫಿ ದಾನಿಗಳಾದ ಜಿ.ಪಂ ಮಾಜಿ ಸದಸ್ಯರಾದ ಪಿ.ಎಂ.ಲತೀಫ್, ಕಾಂಗ್ರೆಸ್ ಮುಖಂಡರಾದ ಹಬಿಅಬ್ದುಲ್ಲಾ, ನಗದು ಪ್ರಯೋಜಕರಾದ ಅನೂಪ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅನೂಪ್ ಕುಮಾರ್, ಮೆಟ್ರೋ ಅಖಿಲ್, ಡಿ.ಸಿ.ಟಿ. ಅಧ್ಯಕ್ಷ ರಿಯಾಜ್, ಪುರಸಭೆಯ ಸದಸ್ಯ ಹೆಚ್.ಎಸ್.ಮತೀನ್, ಮೊಹಮ್ಮದ್ ರಾಫಿ, ಅಬ್ದುಲ್ ಜಲೀಲ್, ಪಂದ್ಯಾವಳಿಯ ಆಯೋಜಕರಾದ ಫ್ರೆಂಡ್ಸ್ ಸಂಘದ ಅಧ್ಯಕ್ಷ ರಾವೂಫ್, ಸಿ.ಎ.ರಾಸಿಕ್, ಇರ್ಷಾದ್ (ಇಚ್ಚು) ಮತ್ತು ನಾವಾಫ್ ಸೇರಿದಂತೆ ಆರು ತಂಡಗಳ ಮಾಲೀಕರು, ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ









