ಮಡಿಕೇರಿ ಫೆ.4 NEWS DESK : ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡು ಗ್ರಾಮದ ಶ್ರೀಮಹಾ ಮೃತ್ಯುಂಜಯ ದೇವಾಲಯದ ವಿಚಾರದಲ್ಲಿ ಎರಡು ಜನಾಂಗಗಳ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯ ಮತ್ತು ಗೊಂದಲ ನಿವಾರಣೆಗೆ ಶಾಂತಿಯುತ ಪರಿಹಾರ ಕಂಡುಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರುಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಮ್ ಆದ್ಮಿ ಪಾರ್ಟಿಯ ಕೊಡಗು ಜಿಲ್ಲಾಧ್ಯಕ್ಷ ಮುಕ್ಕಾಟಿರ ಅಪ್ಪಯ್ಯ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ದೇವಾಲಯದಲ್ಲಿ ಗೊಂದಲ ಏರ್ಪಟ್ಟು ಹಲವು ದಿನಗಳೇ ಕಳೆದಿದೆ, ಈ ವಿಚಾರವಾಗಿ ಎರಡು ಜನಾಂಗಗಳ ನಡುವೆ ಮನಸ್ತಾಪಗಳು ಏರ್ಪಟ್ಟು ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಕೊಡಗಿನ ಕುರಿತು ಕೆಟ್ಟ ಅಭಿಪ್ರಾಯ ಮೂಡುತ್ತಿದೆ. ಶಾಂತಿ ಮತ್ತು ಸಾಮರಸ್ಯ ಕಾಪಾಡಬೇಕಾದ ದೊಡ್ಡ ಜವಾಬ್ದಾರಿ ಹೊಂದಿರುವ ಚುನಾಯಿತ ಪ್ರತಿನಿಧಿಗಳು ಮೌನಕ್ಕೆ ಶರಣಾಗಿರುವುದು ಸರಿಯಾದ ಕ್ರಮವಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ. ಜಿಲ್ಲೆಯ ಸಮಗ್ರ ಅಭ್ಯುದಯಕ್ಕಾಗಿ ಇಲ್ಲಿ ಜೀವನ ಸಾಗಿಸುತ್ತಿರುವ ಪ್ರತಿಯೊಂದು ಜನಾಂಗವೂ ಪರಸ್ಪರ ಪ್ರೀತಿ ವಿಶ್ವಾಸದಿಂದ ಇರಬೇಕಾಗಿದೆ. ಜನಾಂಗ ಜನಾಂಗಗಳ ನಡುವೆ ಬಿರುಕು ಮೂಡಿದಾಗ ಅದನ್ನು ಸರಿಪಡಿಸಿ ಶಾಂತಿ ಸ್ಥಾಪನೆಗೆ ಜನಪ್ರತಿನಿಧಿಗಳು ಮುಂದಾಗಬೇಕಾಗಿದೆ. ಜನರಿಂದ ಆಯ್ಕೆಯಾದವರು ಹಾಗೂ ಸರಕಾರದ ಪ್ರತಿನಿಧಿಗಳು ಜಾಣ ಮೌನಕ್ಕೆ ಶರಣಾದರೆ ಭವಿಷ್ಯದ ದಿನಗಳು ಉತ್ತಮ ಫಲವನ್ನು ನೀಡಲು ಸಾಧ್ಯವಿಲ್ಲ. ಆದ್ದರಿಂದ ಸಚಿವರು ಹಾಗೂ ಶಾಸಕರು ಒಗ್ಗೂಡಿ ಜಿಲ್ಲಾಡಳಿತ ನೀಡಿರುವ ಫೆ.10 ರ ಗಡುವಿನೊಳಗೆ ಒಮ್ಮತದ ಶಾಂತಿಯುತ ತೀರ್ಮಾನಕ್ಕೆ ಬರಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮುಕ್ಕಾಟಿರ ಅಪ್ಪಯ್ಯ ಕೋರಿದ್ದಾರೆ.











