ಮಡಿಕೇರಿ ಫೆ.5 NEWS DESK : ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಭವಿಸುತ್ತಿರುವ ಬಾಣಂತಿಯರ ಸಾವಿಗೆ ನ್ಯಾಯ ದೊರಕಿಸುವುದರೊಂದಿಗೆ, ಬುಡಕಟ್ಟು ಮಂದಿಯ ಆರೋಗ್ಯ ರಕ್ಷಣೆಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ಔಷಧಿಗಳು ಉಚಿತವಾಗಿ ದೊರಕಿಸಿಕೊಡಬೇಕೆಂದು ಕೊಡಗು ಜಿಲ್ಲಾ ಬುಡಕಟ್ಟು ಕಾರ್ಮಿಕರ ಸಂಘದ ಸಲಹೆಗಾರ ಎ.ಬಿ.ವಿನಯ ಕುಮಾರ್ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬುಡಕಟ್ಟು ಕಾರ್ಮಿಕರ ಸಂಘ ಹಾಗೂ ಸಾರ್ವತ್ರಿಕ ಆರೋಗ್ಯ ಆಂದೋಲನ ಸಂಘಟನೆಗಳು ಒಗ್ಗೂಡಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಭವಿಸುತ್ತಿರುವ ಬಾಣಂತಿಯರ ಸಾವಿಗೆ ಸಂಬಂಧಿಸಿದಂತೆ ಅಗತ್ಯ ಕ್ರಮಕ್ಕೆ ಆಗ್ರಹಿಸಿ ಸುಮಾರು ಹನ್ನೊಂದು ಜಿಲ್ಲೆಗಳಲ್ಲಿ ಜನ ಜಾಗೃತಿ ಕಾರ್ಯಕ್ರಮ ನಡೆಸುತ್ತಿವೆ. ಬೇಡಿಕೆಗಳ ಮನವಿ ಪತ್ರವನ್ನು ಆಯಾ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಆರೋಗ್ಯ ಸಚಿವರಿಗೆ ತಲುಪಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ತಿಳಿಸಿದರು. ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಗುಣಮಟ್ಟದ ಔಷಧಿ ಪೂರೈಸಲು ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಹಿಂದೆಯೆ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಲಾಗಿತ್ತಾದರು, ಇದುವರೆಗೆ ಸೂಕ್ತ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು. ರಾಜ್ಯದಲ್ಲಿ ‘ಆರೋಗ್ಯ ಹಕ್ಕು’ ಜಾರಿಯಾಗಬೇಕೆಂದು ಒತ್ತಾಯಿಸಿದ ವಿನಯ ಕುಮಾರ್ ಅವರು, ಪ್ರಸ್ತುತ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ, ಖಾಸಗಿ ಔಷಧಿ ಅಂಗಡಿಗಳಿಂದ ಔಷಧಿ ಖರೀದಿಸಲು ಚೀಟಿಯನ್ನು ಬರೆದುಕೊಡಲಾಗುತ್ತಿದೆ. ಇಂತಹ ವ್ಯವಸ್ಥೆ ನಿಲ್ಲಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ಔಷಧಿಗಳು ಉಚಿತವಾಗಿ ದೊರಕುವ ವ್ಯವಸ್ಥೆಯಾಗಬೇಕೆಂದು ಆಗ್ರಹಿಸಿದರು. ಬುಡಕಟ್ಟು ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ವೈ.ಬಿ.ಗಪ್ಪು ಮಾತನಾಡಿ, ಇಂದಿಗೂ ಸರ್ಕಾರಿ ಆಸ್ಪತ್ರೆಗಳಲ್ಲಿ, ಬುಡಕಟ್ಟು ಸಮೂಹದ ಬಡ ಮಂದಿಯ ಆರೋಗ್ಯ ತಪಾಸಣೆಯನ್ನು ಸಮರ್ಪಕವಾಗಿ ನಡೆಸುತ್ತಿಲ್ಲ. ಔಷಧಿ ಅಂಗಡಿಗಳಿಂದ ಔಷಧಿ ಪಡೆಯುವಂತೆ ವೈದ್ಯರು ಚೀಟಿ ನೀಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ಬುಡಕಟ್ಟು ಕಾರ್ಮಿಕರ ಸಂಘದ ಸದಸ್ಯೆ ಜೆ.ಕೆ.ಪುಷ್ಪ ಮಾತನಾಡಿ, ತಮ್ಮ ಸಂಬಂಧಿಯೊಬ್ಬರು ಮೂಳೆ ಮುರಿತಕ್ಕೆ ಒಳಗಾದ ಸಂದರ್ಭ, ಸರ್ಕಾರಿ ಆಸ್ಪತ್ರೆಯ ವೈದ್ಯರು ಕನಿಷ್ಟ ಏನಾಗಿದೆ ಎನ್ನುವುದನ್ನು ಪರೀಕ್ಷಿಸದೆ, ನಾಲ್ಕು ಗುಳಿಗೆಗಳನ್ನು ನೀಡಿ ಕಳುಹಿಸಿದ್ದಾರೆ. ಬೇರೆ ವಿಧಿ ಇಲ್ಲದೆ ಖಾಸಗಿ ಆಸ್ಪತ್ರೆಗೆ ತೆರಳಿ ಹಣ ನೀಡಿ ಚಿಕಿತ್ಸೆ ಪಡೆದು ಮುರಿದ ಮೂಳೆಯನ್ನು ಸರಿಪಡಿಸಿಕೊಳ್ಳಬೇಕಾಯಿತು. ಇಂತಹ ಪರಿಸ್ಥತಿಯಲ್ಲಿ ಬುಡಕಟ್ಟು ಮಂದಿ ಇದ್ದಾರೆ. ಬಿಪಿಎಲ್, ಆರೋಗ್ಯ ಕಾರ್ಡ್ ಯಾವುದೂ ಕೂಡ ಪ್ರಯೋಜನಕ್ಕೆ ಬರುತ್ತಿಲ್ಲವೆಂದು ಆರೋಪಿಸಿದರು. ಸಂಘದ ಸದಸ್ಯೆ ಜೆ.ಎಸ್.ಪದ್ಮ ಮಾತನಾಡಿ, ಅಪಘಾತ ಮೊದಲಾದ ಸಂದರ್ಭಗಳಲ್ಲಿ, ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುವಿನ ಆರೋಗ್ಯ ಸಂರಕ್ಷಣೆಗೆ ಬದಲಾಗಿ ಪೊಲೀಸ್ ಪುಕಾರು ದಾಖಲಾಗಿದೆಯೇ ಮೊದಲಾದ ಅಂಶಗಳನ್ನು ಮುಂದಿಟ್ಟು ಚಿಕಿತ್ಸೆಯನ್ನು ವಿಳಂಬ ಮಾಡಲಾಗುತ್ತಿದೆ ಎಂದು ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಸದಸ್ಯರಾದ ವೈ.ಎ.ದೇವಕಿ ಹಾಗೂ ಪಿ.ಟಿ.ಜ್ಯೋತಿ ಉಪಸ್ಥಿತರಿದ್ದರು.











